ಆರೋಗ್ಯದಿಂದಿರುವ ದೇಹ ಆತ್ಮದ ಅರಮನೆ: ಡಾ.ಪ್ರಭುಗೌಡ

| Published : Nov 13 2024, 12:53 AM IST

ಆರೋಗ್ಯದಿಂದಿರುವ ದೇಹ ಆತ್ಮದ ಅರಮನೆ: ಡಾ.ಪ್ರಭುಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ವೇಳೆ ಆರೋಗ್ಯವಿಲ್ಲದ ದೇಹವಾಗಿ ಪರಿಣಮಿಸಿದರೇ ಆತ್ಮದ ಸೆರೆಮನೆಯಾಗಲಿದೆ ಎಂದು ಸಾಮೂಹಿಕ ಭಜನೆ ಹಾಗೂ ಆಧ್ಯಾತ್ಮಿಕ ಪ್ರವಚನದ ಪ್ರಾರಂಭೋತ್ಸವದಲ್ಲಿ ಡಾ.ಪ್ರಭುಗೌಡ ಲಿಂಗದಳ್ಳಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಮನುಷ್ಯನಾಗಿ ಜನ್ಮ ತಾಳಿದ ಮೇಲೆ ಒಳ್ಳೆಯ ಆರೋಗ್ಯದಿಂದ ಬಾಳ್ವೆಯನ್ನು ಮುನ್ನಡೆಸಿಕೊಂಡು ಹೋಗುತ್ತ ಸಾಗಿದರೇ ಆರೋಗ್ಯವಿದ್ದಂತಹ ದೇಹ ಆತ್ಮದ ಅರಮನೆಯಂತೆ ಆಗಿ ಇಡೀ ಜೀವನವೆಂಬುವುದು ಸಾರ್ಥಕವಾಗಿ ರೂಪಗೊಳ್ಳಲಿದೆ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.

ಸ್ಥಳೀಯ ಕನ್ನಡ ಶಾಲಾ ಮೈದಾನದಲ್ಲಿ ಯೋಗೋತ್ಸವ ಸಮಿತಿಯ ವತಿಯಿಂದ ಮಂಗಳವಾರ ಏರ್ಪಡಿಸಲಾದ ಸಾಮೂಹಿಕ ಭಜನೆ ಹಾಗೂ ಆಧ್ಯಾತ್ಮಿಕ ಪ್ರವಚನದ ಪ್ರಾರಂಭೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ವೇಳೆ ಆರೋಗ್ಯವಿಲ್ಲದ ದೇಹವಾಗಿ ಪರಿಣಮಿಸಿದರೇ ಆತ್ಮದ ಸೆರೆಮನೆಯಾಗಲಿದೆ. ಕಾರಣ ದೇಹದ ಸಂಪತ್ತಿಗಿಂತ ಯಾವ ಸಂಪತ್ತು ದೊಡ್ಡದಲ್ಲ ಎಂದರು.

ಆರೋಗ್ಯವೆಂದರೇ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಸಂಪೂರ್ಣವಾಗಿ ಚೆನ್ನಾಗಿ ಇರುವುದೇ ಆಗಿದೆ. ಕೇವಲ ದೈಹಿಕ ರೋಗಿಗಳಿಂದ ಮುಕ್ತವಾಗಿರುವುದಲ್ಲ. ಯೋಗದ ದೃಷ್ಟಿಯಲ್ಲಿಯೂ ದೇಹವು ಕೆಲವು ಕೋಶಗಳನ್ನು ಒಳಗೊಂಡಿದೆ. ಕೋಶಗಳಲ್ಲಿ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶಗಳೆಂದಿ ಹೆಸರಿಸಿದ್ದಾರೆ. ಈ ಪಂಚಕೋಶಗಳ ಬಗ್ಗೆ ಉಪನಿಷತ್ತು ವಿವರವಾಗಿ ತಿಳಿಸುತ್ತದೆ ಎಂದು ತಿಳಿಸಿದರು.

ಖ್ಯಾತ ವೈದ್ಯ ಡಾ.ವಿಜಯಕುಮಾರ ಕಾರ್ಚಿ ಮಾತನಾಡಿ, ತಾಳಿಕೋಟೆ ಪಟ್ಟಣದಲ್ಲಿ ಕಳೆದ ೧೫ ವರ್ಷಗಳ ಹಿಂದೆ ಶ್ರೀವಿಠ್ಠಲ ಮಂದಿರದಲ್ಲಿ ಯೋಗ ಶಿಬಿರವನ್ನು ಏರ್ಪಡಿಸಲಾಗಿತ್ತು. ಯೋಗ ಅನ್ನುವುದಕ್ಕೆ ಪ್ರಾಮುಖ್ಯತೆ ಕೊಡಬೇಕು. ಭಾರತದಲ್ಲಿ ಯೋಗ ಸಾಧನೆಗಾಗಿ ಋಷಿಮುನಿಗಳು ಇದೇ ಕಾಯಕವನ್ನಾಗಿ ರೂಪಿಸಿಕೊಂಡು ನೂರಾರು ವರ್ಷಕ್ಕಿಂತ ಹೆಚ್ಚಿಗೆ ಬಾಳಿ ಬೆಳಗಿದ್ದಾರೆ. ಇಡೀ ಭಾರತ ದೇಶದಲ್ಲಿ ಯೋಗಕ್ಕೆ ಮಹತ್ವ ನೀಡುವುದನ್ನು ಅರೀತ ವಿದೇಶಿಗರೂ ಸಹ ಯೋಗಕ್ಕೆ ಮಹತ್ವ ನೀಡುತ್ತ ಸಾಗಿದ್ದಾರೆ. ಅಂತಹ ಮಹತ್ವದ ಸಾಧನೆ ಯೋಗದಲ್ಲಿದೆ ಎಂದು ವಿವರಿಸಿದರು.

ಖ್ಯಾತ ಯೋಗಗುರು ನಿರಂಜನ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಯೋಗದ ಮಹತ್ವ ಹಾಗೂ ಯೋಗಾಭ್ಯಾಸ ಕುರಿತು ಮಾತನಾಡಿ, ಪ್ರಾಣಯಾಮ, ಯೋಗ ಧ್ಯಾನ, ಮಕರಾಸನ, ವಿವಿಧ ಆಸನಗಳ ಕುರಿತು ಪ್ರಾತಿಕ್ಷತೆಯೊಂದಿಗೆ ಸುಮಾರು ಉಪಸ್ಥಿತಿ ೮೦೦ ಜನರಿಗೆ ಮೊದಲನೇ ದಿನವಾದ ಇಂದು ಕೆಲವು ಆಸನಗಳನ್ನು ಪ್ರದರ್ಶಿಸಿದರಲ್ಲದೇ ಎಲ್ಲದಕ್ಕಿಂತ ಆರೋಗ್ಯ ಸಂಪತ್ತು ಎಂಬುವುದು ದೊಡ್ಡದಾಗಿದೆ. ಆರೋಗ್ಯವೇ ಭಾಗ್ಯವೆಂಬುವುದನ್ನು ಎಲ್ಲರೂ ಲಕ್ಷದಲ್ಲಿಟ್ಟುಕೊಂಡು ನಡೆಯಿರಿ ಎಂದು ಸಲಹೆ ನೀಡಿದರು.

ಶಿಕ್ಷಕ ಅಶೋಕ ಹಂಚಲಿ, ಶಿಕ್ಷಕಿ ಸುರೇಖಾ ಸಾಲಂಕಿ ಸೇರಿದಂತೆ ಮಹಿಳೆಯರು, ಪುರುಷರು, ಯೋಗ ಸಮಿತಿಯ ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.------------

ಯೋಗದ ಕುರಿತು ಸುದೀರ್ಘ ಅಭ್ಯಸಿಸಿದ ಹಾಗೂ ಯೋಗ ಸಾಧನೆ ಮಾಡಿಕೊಂಡಿರುವ ಪ.ಪೂ.ನಿರಂಜನ ಮಹಾಸ್ವಾಮಿಗಳು ಇಂದಿನಿಂದ ಯೋಗದ ವಿವರಣೆಯನ್ನು ಪ್ರಾರಂಭಿಸಲಿದ್ದಾರೆ. ಆ ಯೋಗದ ವಿವರಣೆಯನ್ನು ಎಲ್ಲರೂ ಪಡೆದುಕೊಂಡು ಬಾಳಿ ಬೆಳಗುವಂತಹ ಕೆಲಸವಾಗಲಿ.

-ಡಾ.ಪ್ರಭುಗೌಡ ಲಿಂಗದಳ್ಳಿ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರು.

ಯೋಗಾಭ್ಯಾಸದೊಂದಿಗೆ ಆಧ್ಯಾತ್ಮಿಕ ಪ್ರವಚನವನ್ನು ಕೂಡಾ ಆರೋಗ್ಯ ದೃಷ್ಟಿಯಲ್ಲಿ ಕೊಂಡೊಯ್ದು ಇಂದಿನಿಂದ ಪ್ರತಿನಿತ್ಯ ಸಂಜೆ ಪ್ರವಚನ ನೀಡಲಿರುವ ಯೋಗ ಸಾಧಕರಾದ ಪ.ಪೂ.ನಿರಂಜನ ಮಹಾ ಸ್ವಾಮಿಗಳ ಆಶೀರ್ವಚನವನ್ನು ಆಲಿಸಿ, ಪಾಲಿಸಿರಿ.

-ಡಾ.ವಿಜಯಕುಮಾರ ಕಾರ್ಚಿ, ಖ್ಯಾತ ವೈದ್ಯರು.