ತಾಯಿ ಗರ್ಭದಲ್ಲೇ 8 ತಿಂಗಳಿನಿಂದ ಮಗುವಿನ ಬುದ್ಧಿ ವಿಕಾಸವಾಗುತ್ತದೆ. ಈ ಸಂದರ್ಭದಲ್ಲಿ ತಾಯಿಯ ನಡೆ-ನುಡಿ, ಆಚಾರ-ವಿಚಾರಗಳು ಮಗುವಿನ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಆರೋಗ್ಯ, ಆಯಸ್ಸು, ವಿದ್ಯೆ, ಬುದ್ಧಿ ಇರುವ ಮಗು ಆಗಲು ತಾಯಂದಿರ ಕರ್ಮಗಳು ಚೆನ್ನಾಗಿರಬೇಕು. ತಾಯಿಯು ಸಮಷ್ಟಿಪ್ರಜ್ಞೆ, ಸಮಚಿತ್ತದಿಂದ ಇದ್ದರೆ ಆರೋಗ್ಯವಂತ ಮಗು ಜನಿಸುತ್ತದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು ನುಡಿದಿದ್ದಾರೆ.

- ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಓಂಕಾರ ಶಿವಾಚಾರ್ಯ ಸ್ವಾಮೀಜಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ತಾಯಿ ಗರ್ಭದಲ್ಲೇ 8 ತಿಂಗಳಿನಿಂದ ಮಗುವಿನ ಬುದ್ಧಿ ವಿಕಾಸವಾಗುತ್ತದೆ. ಈ ಸಂದರ್ಭದಲ್ಲಿ ತಾಯಿಯ ನಡೆ-ನುಡಿ, ಆಚಾರ-ವಿಚಾರಗಳು ಮಗುವಿನ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಆರೋಗ್ಯ, ಆಯಸ್ಸು, ವಿದ್ಯೆ, ಬುದ್ಧಿ ಇರುವ ಮಗು ಆಗಲು ತಾಯಂದಿರ ಕರ್ಮಗಳು ಚೆನ್ನಾಗಿರಬೇಕು. ತಾಯಿಯು ಸಮಷ್ಟಿಪ್ರಜ್ಞೆ, ಸಮಚಿತ್ತದಿಂದ ಇದ್ದರೆ ಆರೋಗ್ಯವಂತ ಮಗು ಜನಿಸುತ್ತದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು ನುಡಿದರು.

ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಕೃಷ್ಣವೇಣಿ ಎಜುಕೇಷನ್ ಫೌಂಡೇಷನ್ ಹಾಗೂ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ವತಿಯಿಂದ ಗರ್ಭಿಣಿಯರಿಗೆ ಹಮ್ಮಿಕೊಂಡಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ತಾಯಂದಿರು ಸುಳ್ಳು ಹೇಳುವುದು, ಚಾಡಿ ಮಾತಾಡುವುದು, ಅತಿಯಾದ ನಿದ್ದೆಯಿಂದ ದೂರವಿರಬೇಕು. ಕೆಟ್ಟ ಅವಗುಣಗಳನ್ನು ಕೈಬಿಟ್ಟು ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು. ದಾನ-ಧರ್ಮ, ಗುರು-ಹಿರಿಯರಲ್ಲಿ ಭಕ್ತಿ ಇರಬೇಕು. ಒಳ್ಳೆಯ ಪುಸ್ತಕ ಓದಬೇಕು. ಕಾಯಾ, ವಾಚಾ, ಮನಸಾ ಕೆಟ್ಟದ್ದನ್ನು ಮಾಡಬಾರದು. ಸಾತ್ವಿಕ ಆಹಾರ, ಹಣ್ಣು-ತರಕಾರಿ ಸೇವಿಸಬೇಕು. ಇದರಿಂದ ಮಗುವಿನ ಭವಿಷ್ಯವೂ ಉತ್ತಮವಾಗುತ್ತದೆ ಎಂದರು.

ರಾಯ್ಕರ್ ಜ್ಯುವೆಲರ್ಸ್‌ ಮಾಲೀಕ ವಾಸುದೇವ ರಾಯ್ಕರ್ ಮಾತನಾಡಿ, ತಾಯಿ ಪ್ರೀತಿಗೆ ಬೆಲೆ ಕಟ್ಟಲಾಗದು. ಜಾತಿ, ಮತ ಭೇದವಿಲ್ಲದೆ ಗರ್ಭಿಣಿಯರಿಗೆ ಸೀಮಂತ ಮಾಡುವುದು ಮಾತೃಹೃದಯ ಇದ್ದವರಿಂದ ಮಾತ್ರ ಸಾಧ್ಯ. ಮನೆಯ ನಾಲ್ಕು ಗೋಡೆಗಳ ಮಧ್ಯೆ ಕುಟುಂಬದಲ್ಲಿ ನಡೆಯುವ ಸೀಮಂತ ಶಾಸ್ತ್ರವನ್ನು ಸಾರ್ವಜನಿಕವಾಗಿ ಮಾಡುತ್ತಿರುವುದು ಅನುಕರಣೀಯ ಎಂದು ತಿಳಿಸಿದರು. ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿ.ಅವಿನಾಶ್ ಮಾತನಾಡಿ, ಬಹುತೇಕರು ಒಂದೆರೆಡು ವರ್ಷ ಮಾತ್ರ ಹಿರಿಯರನ್ನು ಸ್ಮರಿಸಿಕೊಳ್ಳುತ್ತಾರೆ. ಆದರೆ 21 ವರ್ಷಗಳ ನಂತರವೂ ತಾಯಿಯ ಹೆಸರಿನಲ್ಲಿ ಸಮಾಜಸೇವೆ ಮಾಡುತ್ತಿರುವ ಮಾಲಾ ನಾಗರಾಜ್ ಕಾರ್ಯ ಶ್ಲಾಘನೀಯ ಎಂದರು.

ಸಂಸ್ಥೆ ಅಧ್ಯಕ್ಷೆ ಮಾಲಾ ನಾಗರಾಜ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಪಾಲಿಕೆ ಆಶ್ರಯ ಸಮಿತಿ ಸದಸ್ಯ ಶಾಮನೂರು ಕಣ್ಣಾಳ್ ಅಂಜಿನಪ್ಪ, ರಂಗಕರ್ಮಿ ಚಿಂದೋಡಿ ಚಂದ್ರಧರ, ಉದ್ಯಮಿಗಳಾದ ಮಂಜುನಾಥ, ಭಾರತಿ ಬೆಲ್ಲಿ, ವಕೀಲರಾದ ಅಮೀರಾ ಬಾನು, ಕೆ.ಪ್ರಕಾಶ್ ಇತರರು ಭಾಗವಹಿಸಿದ್ದರು. 30ಕ್ಕೂ ಹೆಚ್ಚು ಗರ್ಭಿಣಿಯರಿಗೆ ಕುಟುಂಬಸ್ಥರ ಸಮ್ಮುಖ ಸಾಮೂಹಿಕ ಸೀಮಂತ ನೆರವೇರಿಸಲಾಯಿತು.

- - -