ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗ್ರಾಮೀಣ ವಿದ್ಯಾರ್ಥಿಗಳು ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ, ಉತ್ತಮ ಪರಿಸರ ನಿರ್ವಹಣೆ ಮಾಡುವುದನ್ನು ಜನರಲ್ಲಿ ಮೂಡಿಸಬೇಕು. ಶಾಲೆಗಳ ಸುತ್ತಮುತ್ತ ಉತ್ತಮ ಪರಿಸರವನ್ನ ನಿರ್ಮಾಣ ಮಾಡಿಕೊಂಡಲ್ಲಿ ಆರೋಗ್ಯವಂತ ಜೀವನ ಸಾಗಿಸಲು ಅನುಕೂಲಕರವಾಗುತ್ತದೆ ಎಂದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ.ಎಚ್. ಕೆ ಎಸ್ ಸ್ವಾಮಿ ಹೇಳಿದರು.ತಾಲೂಕಿನ ಐನಳ್ಳಿ ಕುರುಬರಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಜೆ.ಸಿ.ಬೋಸ್ ಇಕೋ ಕ್ಲಬ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳು ಗ್ರಾಮಗಳಲ್ಲಿ ವಾಸ ಮಾಡುತ್ತಿರುವುದರಿಂದ ಗ್ರಾಮೀಣ ಉದ್ಯೋಗಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಸ್ಥಳೀಯವಾಗಿ ಉತ್ಪನ್ನವಾಗುವ ವಸ್ತುಗಳನ್ನು ಬಳಕೆ ಮಾಡಿ, ಸ್ವದೇಶಿ ತತ್ವವನ್ನು ಅಳವಡಿಸಿಕೊಂಡು ಪರಿಸರ ನಿರ್ವಹಣೆಯನ್ನು ಮಾಡುವುದನ್ನು ಕಲಿತುಕೊಂಡಲ್ಲಿ ಬೇರೆಯವರಿಗೆ ಮಾದರಿಯಾಗುತ್ತಾರೆ ಎಂದರು.
ಆರೋಗ್ಯ ದೃಷ್ಟಿಯಿಂದ ಪ್ಲಾಸ್ಟಿಕ್ ಅನ್ನು ಮಿತ ಬಳಕೆ ಮಾಡಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಗೆ ಬೆಂಕಿ ಹಾಕುವುದನ್ನು ತಡೆಯಬೇಕು. ಗ್ರಾಮಗಳಲ್ಲಿ ಬಳಸಿ ಬಿಸಾಡುವಂತಹ ಪ್ಲಾಸ್ಟಿಕನ್ನು ನಿಷೇಧಿಸಿಕೊಂಡು ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನಾಗಿ ಮಾಡಬೇಕೆಂದರು.ಗಾಂಧೀಜಿಯವರ ಚಿಂತನೆಗಳನ್ನ ಅಳವಡಿಸಿಕೊಂಡು, ಅವರ ಸರಳತೆ ರೂಡಿಸಿಕೊಳ್ಳಬೇಕು. ಖಾದಿ ಮತ್ತು ಚರಕ ಪ್ರಾಮುಖ್ಯತೆ, ಶಿಕ್ಷಣದಲ್ಲಿ ಕೌಶಲ್ಯಾಭಿವೃದ್ಧಿ, ಕೈಕಾಲುಗಳನ್ನು ಬಳಕೆ ಮಾಡಿ ದುಡಿಯುವುದರ ಬಗ್ಗೆ ಹೆಚ್ಚಿನ ಜನ ಜಾಗೃತಿ ಅಗತ್ಯ. ಚರಕವನ್ನ ಪ್ರತಿ ಮನೆ, ಶಾಲೆಗಳಲ್ಲೂ ಸಹ ಬಳಕೆಗೆ ತಂದರೆ ನಿರುದ್ಯೋಗ ಸಮಸ್ಯೆ ನಿವಾರಣೆಯ ಜೊತೆಗೆ ವಿದ್ಯುಚ್ಛಕ್ತಿಯ ಮೇಲೆ ಬೀಳುತ್ತಿರುವ ಒತ್ತಡವನ್ನು ಕಡಿಮೆಗೊಳಿಸಬಹುದು ಎಂದು ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಟ್ಟರು.
ಒಮ್ಮೆ ಬಳಸಿ ಬಿಸಾಡುವಂತಹ ವಸ್ತುಗಳಿಂದ ಮಾಲಿನ್ಯ ಹೆಚ್ಚಾಗುತ್ತಿದ್ದು, ಅಂತಹ ವಸ್ತುಗಳನ್ನ ಮತ್ತೆ ಮರುಬಳಕೆ ಮಾಡುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಕಸದಿಂದ ರಸ ಮಾಡುವುದರ ಬಗ್ಗೆ ಅರಿವು ಮೂಡಿಸಬೇಕು. ಎಲ್ಲಾ ಕಸಗಳನ್ನು ಸಹ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕೆಲಸಗಳಾಗಬೇಕು ಎಂದು ಡಾ.ಸ್ವಾಮಿ ಹೇಳಿದರು.ವಿಜ್ಞಾನ ಶಿಕ್ಷಕಿ ಸುಜಾತಾ ಟಿ.ಎನ್, ಮುಖ್ಯೋಪಾಧ್ಯಾಯ ಮಂಜಪ್ಪ, ಶಿಕ್ಷಕರಾದ ಚಾಪೆ ರೇವಣ್ಣಿ ಇದ್ದರು.