ಸಾರಾಂಶ
ಸ್ವಚ್ಛತೆಯೇ ಮೊದಲ ಆದ್ಯತೆಯಾಗಬೇಕು. ಎಷ್ಟೇ ಔಷಧೋಪಚಾರ ಒದಗಿಸಿದರೂ ಮನುಷ್ಯನ ಆರೋಗ್ಯ ಸುಧಾರಿಸುವುದಿಲ್ಲ. ಮನೆ ಮತ್ತು ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ಉತ್ತಮ ಆರೋಗ್ಯ ಸಾಧ್ಯ.
ಕನ್ನಡಪ್ರಭ ವಾರ್ತೆ ಪಾಂಡವಪುರ
ನಮ್ಮ ಮನೆ, ಸುತ್ತಮುತ್ತಲಿನ ಪರಿಸರ ಹಾಗೂ ಆಸ್ಪತ್ರೆ ಸ್ವಚ್ಛವಾಗಿದ್ದರೆ ಆರೋಗ್ಯವಂತರಾಗಿ ಬದುಕಲು ಸಾಧ್ಯವಾಗಲಿದೆ ಎಂದು ಉಪವಿಭಾಗೀಯ ಆಸ್ಪತ್ರೆ ಮುಖ್ಯ ಆಡಳಿತಾ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ ಹೇಳಿದರು.ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಆವರಣದಲ್ಲಿ ಶ್ರೀಶಂಭುಲಿಂಗೇಶ್ವರ ಎಜುಕೇಶನ್ ಟ್ರಸ್ಟ್ ನ ಬಿಇಡಿ, ಬಿಪಿಇಡಿ ಮತ್ತು ಎಂಪಿಇಡಿ ವಿದ್ಯಾರ್ಥಿಗಳಿಂದ ಮಹಾತ್ಮಾಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ‘ಸ್ವಚ್ಛತಾ ಆಂದೋಲನ’ದಲ್ಲಿ ಮಾತನಾಡಿದರು.
ಸ್ವಚ್ಛತೆಯೇ ಮೊದಲ ಆದ್ಯತೆಯಾಗಬೇಕು. ಎಷ್ಟೇ ಔಷಧೋಪಚಾರ ಒದಗಿಸಿದರೂ ಮನುಷ್ಯನ ಆರೋಗ್ಯ ಸುಧಾರಿಸುವುದಿಲ್ಲ. ಮನೆ ಮತ್ತು ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ಉತ್ತಮ ಆರೋಗ್ಯ ಸಾಧ್ಯ ಎಂದರು.ಎಸ್‌ಎಸ್ ಇಟಿ ಟ್ರಸ್ಟ್ ಉಪಾಧ್ಯಕ್ಷ ಎಂ.ಪಂಚಲಿಂಗೇಗೌಡ ಮಾತನಾಡಿ, ನಮ್ಮ ಸಂಸ್ಥೆಯಿಂದ ಸ್ವಚ್ಛತಾ ಆಂದೋಲನ ಎಂಬ ವಿಭಿನ್ನ ಕಾರ್ಯಕ್ರಮದ ಮೂಲಕ ಮಹಾತ್ಮಾಗಾಂಧಿಜಿ ಜಯಂತಿ ಆಚರಿಸಲಾಗುತ್ತಿದೆ ಎಂದರು.
ಉಪವಿಭಾಗೀಯ ಆಸ್ಪತ್ರೆ ಸೇರಿದಂತೆ ತಾಲೂಕಿನ 10ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛತಾ ಹಾಗೂ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಆಶಯ ಸಾಕಾರಗೊಳಿಸುವ ಒಂದು ಪ್ರಯತ್ನ ನಮ್ಮದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮೋಹನ್ ರಾಜ್, ಶಿಕ್ಷಕರಾದ ಶಶಿ, ಶಿವಕುಮಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ, ಪುಟ್ಟಸ್ವಾಮಿ, ವಿಜಯಕುಮಾರ್, ನಾನ್ ಕ್ಲಿನಿಕಲ್ ಸೂಪರ್ ವೈಸರ್ ಎಲೆಕೆರೆ ಶುಭ, ರೈತಸಂಘದ ಮುಖಂಡ ರೈಟರ್ ಸ್ವಾಮಿಗೌಡ ಇತರರಿದ್ದರು. ಇದೇ ವೇಳೆ ನೂರಾರು ವಿದ್ಯಾರ್ಥಿಗಳು ಆಸ್ಪತ್ರೆ ಆವರಣದಲ್ಲಿ ಬೆಳದಿದ್ದ ಗಿಡ, ಗಂಟಿಗಳು ಹಾಗೂ ಕಸ, ಕಡ್ಡಿಗಳನ್ನು ತೆರವುಗೊಳಿಸಿದರು.