ಕುಷ್ಟಗಿ ಪಟ್ಟಣದ ಎನ್‌ಸಿಎಚ್ ಕಲ್ಯಾಣ ಮಂಟಪದಲ್ಲಿ 2026-27ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ಯು-14 ಮತ್ತು ಯು-17 ವಯೋಮಿತಿಯ ಯೋಗಾಸನ ಸ್ಪರ್ಧೆ ಉದ್ಘಾಟನಾ ಸಮಾರಂಭ ನಡೆಯಿತು.
ಕುಷ್ಟಗಿ: ಮಕ್ಕಳಿಗೆ ಬಾಲ್ಯದಿಂದಲೇ ಯೋಗವನ್ನು ಜೀವನದ ಭಾಗವನ್ನಾಗಿಸಬೇಕು ಎಂದು ಬಿಇಒ ಉಮಾದೇವಿ ಬಸಾಪೂರು ಹೇಳಿದರು.
ಪಟ್ಟಣದ ಎನ್‌ಸಿಎಚ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ, ತಾಲೂಕಾಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸರ್ಕಾರಿ ಉರ್ದು ಪ್ರೌಢಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ಯು-14 ಮತ್ತು ಯು-17 ವಯೋಮಿತಿಯ ಯೋಗಾಸನ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದಿನ ವೇಗದ ಜೀವನಶೈಲಿ ಹಾಗೂ ಮೊಬೈಲ್ ಬಳಕೆಯಿಂದ ಮಕ್ಕಳು ದೈಹಿಕ ಚಟುವಟಿಕೆಯಿಂದ ದೂರವಾಗುತ್ತಿದ್ದಾರೆ. ನಿಯಮಬದ್ಧ ಉಸಿರಾಟದೊಂದಿಗೆ ಯೋಗಾಭ್ಯಾಸ ರೂಢಿಸಿಕೊಂಡರೆ ದೇಹ–ಮನಸ್ಸು ಸದೃಢವಾಗುವ ಜತೆಗೆ ಏಕಾಗ್ರತೆಯೂ ಹೆಚ್ಚುತ್ತದೆ ಎಂದು ಹೇಳಿದರು.ಯೋಗವು ಕೇವಲ ವ್ಯಾಯಾಮವಲ್ಲ. ದೇಹ, ಮನಸ್ಸು ಹಾಗೂ ಉಸಿರಾಟವನ್ನು ಸಮತೋಲನದಲ್ಲಿರಿಸುವ ಜೀವನಪದ್ಧತಿಯಾಗಿದೆ. ಬಾಲ್ಯದಿಂದಲೇ ಯೋಗಾಭ್ಯಾಸ ರೂಢಿಸಿಕೊಂಡರೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜತೆಗೆ ಏಕಾಗ್ರತೆ ವೃದ್ಧಿಯಾಗುತ್ತದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ ಮಾತನಾಡಿ, ಯೋಗ ಹಾಗೂ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.ನೀಲನಗೌಡ ಹೊಸಗೌಡ್ರ ಮಾತನಾಡಿ, ಕ್ರೀಡೆ ಜೀವನದ ಒಂದು ಭಾಗವಾಗಬೇಕು ಎಂದರು. ಮಹಾಂತೇಶ ಜಾಲಿಗಿಡದ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡಾ ಚಟುವಟಿಕೆಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಶರಣಪ್ಪ, ಎಂ.ಎಂ. ಗೊಣ್ಣಾಗರ, ವಾಣಿಶ್ರೀ ಕುಲಕರ್ಣಿ, ಮಲ್ಲಪ್ಪ ಕುದರಿ, ನಾಗಪ್ಪ ಹೊಸವಕ್ಕಲ್, ಉದಯಕುಮಾರ ಕೊಪ್ಪಳ, ಜಗದೀಶ ಸೂಡಿ, ಹನೀಫ ಬಿಳೇಕುದರಿ ಇದ್ದರು. ಯಮನಪ್ಪ ಚೂರಿ ಸ್ವಾಗತಿಸಿದರು. ನಾಗಪ್ಪ ಬಿಳಿಯಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಓಟದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ರಾಕೇಶ ಗಂಗಾವತಿ ಅವರನ್ನು ಸನ್ಮಾನಿಸಲಾಯಿತು.