ದೈಹಿಕ ಸ್ವಚ್ಛತೆ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ದಿನನಿತ್ಯ ಅಭ್ಯಾಸ ಮಾಡುವುದರ ಮೂಲಕ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು.

ಶಿರಸಿ: ಆರೋಗ್ಯವೇ ನಮ್ಮ ಬಹುದೊಡ್ಡ ಸಂಪತ್ತು. ಮನುಷ್ಯ ಆರೋಗ್ಯವಾಗಿದ್ದರೆ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ. ಆರೋಗ್ಯಯುತ ಸಮಾಜದಿಂದ ಆರೋಗ್ಯವಂತ ದೇಶವನ್ನು ಕಟ್ಟಬಹುದು ಮತ್ತು ಸ್ವಚ್ಛ ದೇಶದಿಂದ ಆರ್ಥಿಕ ಪ್ರಗತಿಯೂ ಸಾಧ್ಯ ಎಂದು ಪ್ರಭಾರ ಜಿಲ್ಲಾ ಆಯುಷ್ ಅಧಿಕಾರಿ ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಜಗದೀಶ ಯಾಜಿ ವಿ. ಅವರು ತಿಳಿಸಿದರು.

ಶನಿವಾರ ನ್ಯಾಯಾಲಯದ ವಕೀಲರ ಸಭಾಂಗಣದಲ್ಲಿ ರಾಷ್ಟ್ರೀಯ ಆಯುಷ್‌ ಅಭಿಯಾನದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆಯುಷ್‌ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ಆಯುಷ್ ಇಲಾಖೆ, ಸರ್ಕಾರಿ ಆಯುರ್ವೇದ ಆಸ್ಪತ್ರೆ, ವಕೀಲರ ಸಂಘದ ಆಶ್ರಯದಲ್ಲಿ ಕೀಲು ಮೂಳೆ ವ್ಯಾಧಿಗಳಿಗೆ ವಯೋಮಿತ್ರ ಉಚಿತ ಆಯುಷ್‌ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೈಹಿಕ ಸ್ವಚ್ಛತೆ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ದಿನನಿತ್ಯ ಅಭ್ಯಾಸ ಮಾಡುವುದರ ಮೂಲಕ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು. ಅಸಾಂಕ್ರಾಮಿಕ ರೋಗಗಳು ಒಂದು ಕುಟುಂಬದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿತ್ತದೆ. ದೀರ್ಘಕಾಲೀನ ವ್ಯಾಧಿಗಳಿಗೆ ಆಯುರ್ವೇದದಲ್ಲಿ ಉತ್ತಮ ಚಿಕಿತ್ಸೆ ಇದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಶಾರದಾ ಸಿ. ಹಟ್ಟಿ ಅವರು, ಆಯುರ್ವೇದದಲ್ಲಿ ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆಯಿದೆ ಎಂದು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡರು ಹಾಗೂ ಡಾ. ಜಗದೀಶ ಯಾಜಿ ಅವರ ವೈದ್ಯಕೀಯ ಸೇವೆಯನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಶಿರಸಿ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಹುಲ್ಲೂರು ಹೇಮಲತಾ ಬಸಪ್ಪ ಅವರು, ಆರೋಗ್ಯವೇ ಭಾಗ್ಯ. ಆರೋಗ್ಯ ಕಳೆದುಕೊಂಡರೆ ಜೀವನದಲ್ಲಿ ಎಲ್ಲವೂ ಕಳೆದುಕೊಂಡಂತೆ. ಹಾಗಾಗಿ ಪ್ರತಿಯೊಬ್ಬರೂ ಆರೋಗ್ಯ ಕಾಳಜಿ ವಹಿಸಬೇಕೆಂದರು.

2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಪ್ರಿಯಾಂಕಾ ಚೌಹಾಣ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ನರೇಂದ್ರ ಪ್ರಕಾಶ ಆರ್‌., ವಕೀಲರ ಸಂಘದ ಅಧ್ಯಕ್ಷ ಸಿ.ಎಫ್‌. ಈರೇಶ, ಉಪಾಧ್ಯಕ್ಷ ರಾಜೀವ ರೇವಣಕರ, ಪೊಲೀಸ್ ಉಪ ಅಧೀಕ್ಷಕರಾದ ಗೀತಾ ಪಾಟೀಲ ಹಾಗೂ ಪೊಲೀಸ್‌ ಉಪ ನಿರೀಕ್ಷಕರಾದ ಬಸವರಾಜ ಕನಕಟ್ಟಿ ಉಪಸ್ಥಿತರಿದ್ದರು. ವಕೀಲರಾದ ಈಶ್ವರ ನಾಯ್ಕ ಶಿಬಿರವನ್ನು ನಿರೂಪಿಸಿದರು. ಹಿರಿಯ ಶಿರಸ್ತೇದಾರರಾದ ಮಹಾಲಕ್ಷ್ಮೀ ಹೆಗಡೆ ವಂದಿಸಿದರು.