ಸಾರಾಂಶ
ವ್ಯಸನಿಗಳ ಬದುಕು ಬದಲಾಯಿಸಿರುವ ಲಿಂ.ಡಾ.ಮಹಾಂತ ಶಿವಯೋಗಿಗಳು ಸಮಾಜಕ್ಕೆ ಮಾರಕವಾಗಿರುವ ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕಿಸಿಕೊಂಡು, ಆರೋಗ್ಯಕರ ಸಮಾಜ ಕಟ್ಟಿರುವ ಮಹಾಶರಣರಾಗಿದ್ದಾರೆ. ಅವರು ಹಾಕಿಕೊಟ್ಟಿರುವ ಮಾರ್ಗದಶನದಲ್ಲಿ ಸಮಾಜ ನಿರ್ಮಾಣವಾಗಬೇಕು ಎಂದು ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವ್ಯಸನಿಗಳ ಬದುಕು ಬದಲಾಯಿಸಿರುವ ಲಿಂ.ಡಾ.ಮಹಾಂತ ಶಿವಯೋಗಿಗಳು ಸಮಾಜಕ್ಕೆ ಮಾರಕವಾಗಿರುವ ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕಿಸಿಕೊಂಡು, ಆರೋಗ್ಯಕರ ಸಮಾಜ ಕಟ್ಟಿರುವ ಮಹಾಶರಣರಾಗಿದ್ದಾರೆ. ಅವರು ಹಾಕಿಕೊಟ್ಟಿರುವ ಮಾರ್ಗದಶನದಲ್ಲಿ ಸಮಾಜ ನಿರ್ಮಾಣವಾಗಬೇಕು ಎಂದು ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಹೇಳಿದರು.ನವನಗರದ ಸರಕಾರಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಲಿಂ. ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಮಾಜದಲ್ಲಿರುವ ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿರುವ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಪಡೆದು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಅವರು ವ್ಯಸನಮುಕ್ತ ವ್ಯಕ್ತಿ, ಕುಟುಂಬ, ಸಮಾಜ, ಗ್ರಾಮಗಳ ನಿರ್ಮಾಣ ಮಾಡುವ ಜೊತೆಗೆ ಮಹಾಂತ ಜೋಳಿಗೆ ಕಾರ್ಯಕ್ರಮದಲ್ಲಿ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು, ಸಾಹಿತಿಗಳು, ಕವಿಗಳು, ಧರ್ಮ ಗುರುಗಳನ್ನು ಆಹ್ವಾನಿಸಿ ಅವರಿಂದ ವ್ಯಸನಗಳಿಂದಾಗುವ ಹಾನಿಗಳ ಕುರಿತು ವಿಶೇಷ ಉಪನ್ಯಾಸ ಮಾಡಿಸುವ ಮೂಲಕ ವ್ಯಸನಿಗಳ ಮನಪರಿವರ್ತನೆ ಮಾಡುವುದರ ಜೊತೆಗೆ ಮಕ್ಕಳು, ವಿದ್ಯಾರ್ಥಿಗಳು, ಯುವ ಜನಾಂಗ ದುಶ್ಚಟಗಳಿಗೆ ಬಲಿಯಾದಂತೆ ಅರಿವು ಮೂಡಿಸುತ್ತಿದ್ದರು. ಶ್ರೀಗಳ ಮಹಾಂತ ಜೋಳಿಗೆಯ ಪ್ರಭಾವದಿಂದ ಲಕ್ಷಾಂತರ ಜನರು ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ ಎಂದು ಹೇಳಿದರು.ಸಾಂಸ್ಕೃತಿಕ ವಿಭಾಗದಡಿಯಲ್ಲಿ ವ್ಯಸನ ಮುಕ್ತ ದಿನಾಚರಣೆ 2025ರ ಅಂಗವಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನವಾಗಿ ನೀಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಮಹಾಂತ ಜೋಳಿಗೆ ನಾಟಕ ಪ್ರದರ್ಶನ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ವ್ಯಸನಮುಕ್ತ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.