ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಯೋಗ ಭಾರತದ ಪ್ರಾಚೀನ ಪರಂಪರೆಯ ಪ್ರತೀಕ. ಪ್ರತಿಯೊಬ್ಬರು ಯೋಗವನ್ನು ಅಳವಡಿಸಿಕೊಂಡರೇ ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯ ಎಂದು ಪ್ರಥಮ ದರ್ಜೆಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಾಂತಿನಾಥ ಬಳೋಜ ಹೇಳಿದರು.ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಅಥಣಿ ಪತಂಜಲಿ ಯೋಗ ಸಮಿತಿಯಿಂದ ನಡೆದ ಶಾಲಾ ಮಕ್ಕಳ ಯೋಗ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಯೋಗ ಜೀವನದ ಒಂದು ಭಾಗವಾಗಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಲು ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು. ಅಥಣಿ ಪತಂಜಲಿ ಯೋಗ ಸಮಿತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಯೋಗದ ಮಹತ್ವ ತಿಳಿಸಿಕೊಡಲಾಯಿತು.ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಎಸ್.ಕೆ.ಹೊಳೆಪ್ಪನವರ ಮಾತನಾಡಿ, ವಿಶ್ವ ಯೋಗ ದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಈ ಬಾರಿ ಯೋಗ ಸ್ಪರ್ಧೆ ಆಯೋಜಿಸಲಾಗಿದೆ. ಅಥಣಿ ಪಟ್ಟಣದ 20ಕ್ಕೂ ಅಧಿಕ ಶಾಲೆಯ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರಥಮ ದ್ವಿತೀಯ, ತೃತೀಯ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಡಿ.ಮೇಕನಮರಡಿ ಮಾತನಾಡಿದರು. ಈ ವೇಳೆ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ, ಸಾಮಾಜಿಕ ಕಾರ್ಯಕರ್ತ ಶಿವಾನಂದ ಮಾಲಗಾವಿ, ಪ್ರೊ.ವಿಲಾಸ ಕಾಂಬಳೆ, ಎಸ್.ಎಲ್.ಪೂಜಾರಿ, ನಿರ್ಣಾಯಕರಾಗಿ ವಿಲಾಸ ನಿಂಬಾಳ್ಕರ, ಡಾ.ಆರ್.ಎಸ್ ದೊಡ್ಡನಿಂಗಪಗೋಳ, ಲಲಿತಾ ಮೇಕನಮರಡಿ ಸೇರಿ ಇತರರು ಇದ್ದರು.ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಥಣಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.