ಆರೋಗ್ಯ ಪೂರ್ಣ ಸಮಾಜಕ್ಕೆ ನೈತಿಕ ಮೌಲ್ಯಗಳ ಅಗತ್ಯವಿದೆ

| Published : Mar 26 2024, 01:03 AM IST

ಸಾರಾಂಶ

ಸುಖ ಶಾಂತಿಯುತ ಬದುಕಿಗೆ ಧರ್ಮ ಮತ್ತು ಧರ್ಮಾಚರಣೆ ಮುಖ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ಶಾಸ್ತ್ರ ಮತ್ತು ಶಾಸ್ತ್ರದ ಭಯ ಇರಬೇಕಂತೆ. ಇವೆರಡನ್ನೂ ಮನುಷ್ಯ ಮೀರಿ ನಡೆಯುತ್ತಿರುವ ಕಾರಣ ಜೀವನದಲ್ಲಿ ಶಾಂತಿ ನೆಮ್ಮದಿಯಿಲ್ಲ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ನೈತಿಕ ಮೌಲ್ಯಗಳ ಸಂರಕ್ಷಣೆ ಅಗತ್ಯ ಬಹಳಷ್ಟಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

- ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಅಂಗವಾಗಿ ನೈತಿಕ ಮೌಲ್ಯಗಳ ಸಂರಕ್ಷಣೆ ಸಮಾರಂಭ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸುಖ ಶಾಂತಿಯುತ ಬದುಕಿಗೆ ಧರ್ಮ ಮತ್ತು ಧರ್ಮಾಚರಣೆ ಮುಖ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ಶಾಸ್ತ್ರ ಮತ್ತು ಶಾಸ್ತ್ರದ ಭಯ ಇರಬೇಕಂತೆ. ಇವೆರಡನ್ನೂ ಮನುಷ್ಯ ಮೀರಿ ನಡೆಯುತ್ತಿರುವ ಕಾರಣ ಜೀವನದಲ್ಲಿ ಶಾಂತಿ ನೆಮ್ಮದಿಯಿಲ್ಲ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ನೈತಿಕ ಮೌಲ್ಯಗಳ ಸಂರಕ್ಷಣೆ ಅಗತ್ಯ ಬಹಳಷ್ಟಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರ ಸ್ವಾಮಿ ಮಹಾರಥೋತ್ಸವ ಅಂಗವಾಗಿ ಸೋಮವಾರ ನಡೆದ ನೈತಿಕ ಮೌಲ್ಯಗಳ ಸಂರಕ್ಷಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮನುಷ್ಯ ಜೀವನದಲ್ಲಿ ಧರ್ಮ ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸದಿದ್ದರೆ ಜೀವನ ವ್ಯರ್ಥ. ಜೀವನ ಹೂದೋಟದಲ್ಲಿ ಅರಳುವ ಹೂಗಳೆಷ್ಟೋ ಬಾಡುವ ಜೀವಗಳು ಎಷ್ಟೋ ಹೇಳಲಾಗದು. ಅವರವರ ಬದುಕಿನಲ್ಲಿ ಅಳವಡಿಸಿಕೊಂಡ ನೀತಿ ನಿಯತ್ತುಗಳೇ ಕಾರಣವಾಗುತ್ತವೆ. ಭೌತಿಕ ಬದುಕಿನ ಸಂಪನ್ಮೂಲಗಳಾಗಲಿ ಸಿರಿ ಸಂಪತ್ತಿನ ಸಂಗ್ರಹವಾಗಲಿ ಮಾನವನಿಗೆ ಸಂತೃಪ್ತಿ ತಂದು ಕೊಡಲಾರವು. ಇದರೊಂದಿಗೆ ಒಂದಿಷ್ಟಾದರೂ ಆಧ್ಯಾತ್ಮ ಚಿಂತನೆ ಇರಬೇಕಾಗುತ್ತದೆ.

ಇಂದು ಎಲ್ಲೆಡೆ ಶಾಂತಿಗಾಗಿ ಹುಡುಕಾಟ ನಡೆದಿದೆ. ಆದರೆ ಕಳೆದು ಹೋದ ಸ್ಥಾನದಲ್ಲಿಲ್ಲ. ಬೇರೆಲ್ಲಿಯೋ ಅನ್ವೇಷಣೆ ನಡೆ ಯುತ್ತಿದೆ. ಮಂತ್ರ ತೀರ್ಥ ಗುರು ದೈವ ದೇವರು ಮತ್ತು ವೈದ್ಯರಲ್ಲಿ ಯಾವ ಭಾವನೆಗಳನ್ನು ಇಟ್ಟುಕೊಂಡು ನಡೆಯುತ್ತೇ ವೆಯೋ ಅದಕ್ಕೆ ತಕ್ಕ ಫಲಗಳನ್ನು ಮನುಷ್ಯ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀತಿಯಿಲ್ಲದ ಶಿಕ್ಷಣ ಭೀತಿ ಇಲ್ಲದ ಶಾಸನ, ಮಿತಿ ಇಲ್ಲದ ಜೀವನ, ಸೀಮಾತೀತವಾದ ಸ್ವಾತಂತ್ರ್ಯ ಇವು ರಾಷ್ಟ್ರ ವಿಘಾತಗಳೆಂದು ಶ್ರೀಮದ್ರಂಭಾಪುರಿ ವೀರಗಂಗಾಧರ ಜಗದ್ಗುರು ನಿರೂಪಿಸಿದ್ದನ್ನು ಯಾರೂ ಮರೆಯಲಾಗದು.

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾ ರಥೋತ್ಸವದ ಅಂಗವಾಗಿ ಹಮ್ಮಿಕೊಂಡ ಎಲ್ಲಾ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ನಡೆದಿರುವುದು ತಮಗೆ ಸಂತೋಷ ತಂದಿದೆ ಎಂದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸ್ವಸ್ಥ ಸಮಾಜ ಕಟ್ಟಿ ಬೆಳೆಸಲು ನೈತಿಕ ನೀತಿ ರೀತಿಗಳ ಪರಿಪಾಲನೆ ಅಗತ್ಯವಿದೆ. ಸಂಪತ್ತಿನ ಬದುಕಿನಲ್ಲಿ ಬಾಳುವ ಮನುಷ್ಯನಿಗೆ ಗುಣವಂತರು, ಗುಣಾದರ್ಶಗಳು ಕಾಣಲಾರವು. ಅನ್ಯಾಯ ಅಸತ್ಯ ಹೇಳುವ ಜನರು ಹೆಚ್ಚಿರುವಾಗ ಸತ್ಯವಂತರು ಸುಮ್ಮನಿರುವ ಕಾಲ ಬಂದಿದೆ. ಸರ್ವೋದಯದ ಬಾಳಿಗೆ ಸಂತ ಮಹಂತರು ಶ್ರಮಿಸಿದ್ದಾರೆ. ಅನ್ನದಾನ ವಿದ್ಯಾದಾನ ಮಾಡಿದ ಕೀರ್ತಿ ವೀರಶೈವ ಮಠಗಳಿಗೆ ಸಲ್ಲುತ್ತದೆ ಎಂದರು. ಕವಲೇದುರ್ಗ ಭುವನಗಿರಿ ಸಂಸ್ಥಾನಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿ ಮಾತನಾಡಿ, ವೈಚಾರಿಕತೆ ಹೆಸರಿನಲ್ಲಿ ಸತ್ಯ ಸಂಸ್ಕೃತಿ ಮತ್ತು ಪರಂಪರೆಗಳ ಬಗೆಗೆ ನಿರ್ಲಕ್ಷ್ಯ ಮನೋಭಾವ ಹೆಚ್ಚುತ್ತಿದೆ. ಎಲ್ಲಿ ನೋಡಿದಲ್ಲಿ ಮೋಸ ವಂಚನೆ ಕುಯುಕ್ತಿ ಜನರು ಹೆಚ್ಚುತ್ತಿರುವಾಗ ಸಾತ್ವಿಕರು ಮೌನ ವಹಿಸುವುದು ಅನಿವಾರ್ಯ. ಮಾತಿನಿಂದಲೇ ಸ್ವರ್ಗ ತೋರಿಸಬಲ್ಲೆ ಎಂದು ಹೇಳುವವರು ಇರುವಾಗ ಸಾಧನೆ ಶ್ರಮ ವಹಿಸಿ ಕೆಲಸ ಮಾಡುವವರನ್ನು ಗುರುತಿಸುವವರು ಬಹಳ ವಿರಳ ರಾಗಿದ್ದಾರೆ. ಸಾತ್ವಿಕ, ತಾತ್ವಿಕ ಮೌಲ್ಯಾಧಾರಿತ ಚಿಂತನೆ ಸಂರಕ್ಷಿಸುವ ಅವಶ್ಯಕತೆ ಬಹಳಷ್ಟಿದೆ ಎಂದರು.ಸಮಾರಂಭವನ್ನು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಹಾಗೂ ಮೈಸೂರು ಜಪದಕಟ್ಟಿಮಠದ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ ಉದ್ಘಾಟಿಸಿದರು. ಬೀರೂರು ಶ್ರೀಮದ್ರಂಭಾಪುರಿ ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಶಾಂತಮಲ್ಲ ಶಿವಾಚಾರ್ಯರು, ರೇವಣಸಿದ್ಧೇಶ್ವರ ಶಿವಾಚಾರ್ಯರು, ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಉಪದೇಶಾಮೃತ ನೀಡಿದರು.ಎಡೆಯೂರು ರೇಣುಕ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಕೇದಾರ ಶಿವಶಾಂತವೀರ ಶಿವಾಚಾರ್ಯರು, ವೀರಸಂಗಮೇಶ್ವರ ಶಿವಾಚಾರ್ಯರು, ಗಂಗಾಧರ ಶಿವಾಚಾರ್ಯರು ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

೨೫ಬಿಹೆಚ್‌ಆರ್ ೯:

ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಯುಗಮಾನೋತ್ಸವದ ಅಂಗವಾಗಿ ನಡೆದ ನೈತಿಕ ಮೌಲ್ಯಗಳ ಸಂರಕ್ಷಣೆ ಸಮಾರಂಭವನ್ನು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಹಾಗೂ ಮೈಸೂರು ಜಪದಕಟ್ಟಿಮಠದ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿದರು.೨೫ಬಿಹೆಚ್‌ಆರ್ ೧೦: ಶ್ರೀಪೀಠದಲ್ಲಿ ನಡೆದ ವಸಂತೋತ್ಸವದ ಧಾರ್ಮಿಕ ಸಮಾರಂಭ.