ಆರೋಗ್ಯವಂತ ಸಮಾಜಕ್ಕೆ ಪೌಷ್ಟಿಕ ಆಹಾರ ಅಗತ್ಯ

| Published : Sep 19 2024, 01:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ಇತ್ತೀಚೆಗೆ ಮಕ್ಕಳು ಮಾತ್ರವಲ್ಲದೆ ಹರೆಯದವರಲ್ಲೂ ಅಪೌಷ್ಟಿಕತೆ ಹಾಗೂ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಅಪೌಷ್ಟಿಕತೆ ನಿವಾರಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಿಂದಗಿ ಸಿಡಿಪಿಒ ಶಂಭುಲಿಂಗ ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ಇತ್ತೀಚೆಗೆ ಮಕ್ಕಳು ಮಾತ್ರವಲ್ಲದೆ ಹರೆಯದವರಲ್ಲೂ ಅಪೌಷ್ಟಿಕತೆ ಹಾಗೂ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಅಪೌಷ್ಟಿಕತೆ ನಿವಾರಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಿಂದಗಿ ಸಿಡಿಪಿಒ ಶಂಭುಲಿಂಗ ಹಿರೇಮಠ ಹೇಳಿದರು.

ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿ ಬುಧವಾರ ತಾಲೂಕು ಮಟ್ಟದ ಪೋಷಣ ಅಭಿಯಾನ ಕಾರ್ಯಕ್ರಮದಡಿಯಲ್ಲಿ ನಡೆದ ಪೌಷ್ಟಿಕ ಆಹಾರ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ, ಪೋಷಣ ಅಭಿಯಾನ ಆರಂಭಿಸಿತ್ತು. ಇಲಾಖೆಯಿಂದ ಈಗಾಗಲೇ ಗರ್ಭಿಣಿ, ಬಾಣಂತಿಯರಿಗೆ, ಶಿಶುಗಳಿಗೆ, ಕಿಶೋರಿಯರಿಗೆ ಆರೋಗ್ಯ ತಪಾಸಣೆ ಶಿಬಿರ, ಗರ್ಭಿಣಿ, ಬಾಣಂತಿಯರ ತೂಕ ಮತ್ತು ಆರೋಗ್ಯ, ಪೂರಕ ಪೌಷ್ಟಿಕ ಆಹಾರದ ಮಹತ್ವ ಸೇರಿದಂತೆ ವರ್ಷವಿಡಿ ಅನೇಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆದರೂ ಆಹಾರದ ಬಗ್ಗೆ ನಿಷ್ಕಾಳಜಿ ವಹಿಸುತ್ತಿರುವುದು ಕಂಡು ಬರುತ್ತದೆ. ಇದು ಸರಿಯಲ್ಲ ಎಂದರು.ಸಂದರ್ಭದಲ್ಲಿ ಅನ್ನ ಪ್ರಾಶಣ, ಅಪೌಷ್ಟಿಕತೆ ನಿವಾರಣೆ ಕುರಿತು ಅರಿವು, ಹೆಣ್ಣು ಮಗುವಿನ ಜನ್ಮ ದಿನಾಚರಣೆ, ಮರ ನೆಡುವ ಕಾರ್ಯಕ್ರಮ, ಸುಕನ್ಯಾ ಸಮೃದ್ಧಿ ಯೋಜನೆ ಅಡಿ ಸಾಂಕೇತಿಕವಾಗಿ ಐದು ಜನ ಫಲಾನುಭವಿಗಳಿಗೆ ಪಾಸ್ ಬುಕ್ ವಿತರಣೆ ಸೇರಿ ಹಲವಾರು ಯೋಜನೆಗಳ ಕುರಿತು ಜನರಿಗೆ ಮಾಹಿತಿಯನ್ನು ನೀಡಲಾಯಿತು.

ವಿಜಯಪುರ ಉಜ್ವಲ ಸಂಸ್ಥೆಯ ನಿರ್ದೇಶಕರಾದ ಸಾಗರ್ ಘಾಟಿಗೆ ಮಾತನಾಡಿ, ಶಾಲಾ ಪೂರ್ವ ಶಿಕ್ಷಣದ ಕುರಿತು ಮಾಹಿತಿ ನೀಡಿದರು. ಸಂದರ್ಭದಲ್ಲಿ ಎಸಿಡಿಪಿಒ ಎಸ್.ಎನ್.ಕೋರವಾರ ಮಾತನಾಡಿದರು. ಸಾನಿಧ್ಯವನ್ನು ಸ್ಥಳೀಯ ವೀರಘಂಟಯ್ಯ ಗದ್ದಗಿಮಠ ವಹಿಸಿಕೊಂಡಿದ್ದರು. ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಪ್ರಮುಖರು, ಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.