ಸಾರಾಂಶ
ಮುಂಡಗೋಡ: ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ತಿಳಿಸಿದರು.
ಸೋಮವಾರ ಪಟ್ಟಣದ ದೈವಜ್ಞ ಸಭಾಭವನದಲ್ಲಿ ಸಂಪೂರ್ಣತಾ ಅಭಿಯಾನ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾವುದೇ ಒಂದು ಪ್ರದೇಶದಲ್ಲಿರುವ ಸಮಸ್ಯೆ ಪತ್ತೆ ಹಚ್ಚಿ ಪರಿಹರಿಸುವ ಮೂಲಕ ಜನರ ಜೀವನ ಸುಧಾರಿಸುವುದೇ ಸಂಪೂರ್ಣತಾ ಅಭಿಯಾನದ ಮುಖ್ಯ ಉದ್ದೇಶವಾಗಿದ್ದು, ಸುಮಾರು ೩ ತಿಂಗಳ ಕಾಲ ಈ ಅಭಿಯಾನದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರ ಪ್ರಮುಖವಾದುದು ಎಂದರು.ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಜಾರಿ ಮಾಡಲಾಗಿರುವ ಈ ಯೋಜನೆ ಸಫಲವಾಗಬೇಕಿದೆ. ಮುಂದುವರಿದ ತಾಲೂಕಾಗಿ ಹೊರಹೊಮ್ಮಬೇಕಾದರೆ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿಕ್ಷಣದಲ್ಲಿ ೪ನೇ ಸ್ಥಾನದಲ್ಲಿರುವ ಮುಂಡಗೋಡ ತಾಲೂಕು ಮುಂದಿನ ದಿನಗಳಲ್ಲಿ ಶೈಕ್ಷಣಿಕವಾಗಿ ಮತ್ತಷ್ಟು ಮೇಲೆ ಬರಬೇಕಿದೆ ಎಂದರು.
ಜಿಪಂ ಮುಖ್ಯ ಯೋಜನಾಧಿಕಾರಿ ವಿನೋದ ಅಣವೇಕರ ಮಾತನಾಡಿ, ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಸ್ಫೂರ್ತಿ ಎಂಬುದು ತುಂಬಾ ಮುಖ್ಯ. ಯಾವುದೇ ಕೆಲಸವನ್ನು ಶ್ರದ್ಧೆ, ಆಸಕ್ತಿ ಹಾಗೂ ಕ್ರಿಯಾಶೀಲವಾಗಿ ಮಾಡಿದರೆ ಮಾತ್ರ ಯಶಸ್ಸು ದೊರೆಯುತ್ತದೆ. ಈ ಯೋಜನೆ ಸಂಪೂರ್ಣ ಯಶಸ್ವಿಯಾಗುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಕಾರ್ಯ ಅಪಾರವಾಗಿದೆ ಎಂದರು.ಮಳಗಿ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ವೀಣಾ ನಾಯ್ಕ ಸಾವಯವ ಕೃಷಿ ಉತ್ತಮ ಎಂದು ಪ್ರತಿಪಾದಿಸಿದರು. ಸಹನಾ ರಾಸಾಯನಿಕ ಕೃಷಿ ಉತ್ತಮ ಎಂದು ಪ್ರತಿಪಾದಿಸಿದರು.
ಇದಕ್ಕೂ ಮೊದಲು ವಿವಿಧ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರು ಪ್ರದರ್ಶಿಸಿದ ಗೃಹ ಉದ್ಯೋಗದಿಂದ ತಯಾರಿಸಲಾದ ವಸ್ತುಗಳನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ಶಿಶುವಿಗೆ ಅನ್ನಪ್ರಾಶನ ಮಾಡಿಸಿದರು.ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಮು ಬಯಲುಸೀಮೆ, ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಳೇಶ ಸಿದ್ದಯ್ಯನವರ, ತಾಲೂಕು ಆರೋಗ್ಯಾಧಿಕಾರಿ ಭರತ, ಪಶು ಸಂಗೋಪನೆ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಹೆಗಡೆ, ರಾಜೇಶ್ವರಿ ಕದಂ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಫೀಕ್ ಮಿರಾನಾಯ್ಕ ಮಳಗಿ ಗ್ರಾಪಂ ಅಧ್ಯಕ್ಷೆ ಕಸ್ತೂರಿ ತಳವಾರ, ಇಂದೂರ ಗ್ರಾಪಂ ಅಧ್ಯಕ್ಷ ಫಕ್ಕೀರೇಶ ತಾವರಗೇರಿ, ಕೋಡಂಬಿ ಗ್ರಾಪಂ ಅಧ್ಯಕ್ಷೆ ಪ್ರೇಮಾ ಕೊರವರ, ಪಾಳಾ ಗ್ರಾಪಂ ಉಪಾಧ್ಯಕ್ಷ ಮೌಲಾಲಿ ಪಾಟೀಲ ಉಪಸ್ಥಿತರಿದ್ದರು.
ಟಿ.ವೈ. ದಾಸನಕೊಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಅಭಿವೃದ್ಧಿ ಆಕಾಂಕ್ಷಿ ಕಾರ್ಯಕ್ರಮದ ಅಧಿಕಾರಿ ನಖಲುಬಾಯಿ ಕೋಕರೆ ಯೋಜನೆ ಬಗ್ಗೆ ಮಾಹಿತಿ ನೀಡಿದರು. ರಫೀಕ್ ಮಿರಾನಾಯ್ಕ ವಂದಿಸಿದರು.