ಸಾರಾಂಶ
ಹುಬ್ಬಳ್ಳಿ:
ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳದ್ದು ವಿರೋಧಿಗಳೂ ಪ್ರೀತಿಸುವ ಹೃದಯ. ಇಂತಹ ಶ್ರೀಗಳ ಮಾತೃಹೃದಯಕ್ಕೆ ಮನಸೋಲದವರಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಇಲ್ಲಿನ ಭವಾನಿ ನಗರದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದಕ್ಷಿಣ ಕನ್ನಡ ದ್ರಾವಿಡ್ ಬ್ರಾಹ್ಮಣ ಸಮಾಜ ಹಾಗೂ ಭವಾನಿ ನಗರ ಶ್ರೀರಾಘವೇಂದ್ರ ಸ್ವಾಮಿ ಮಠ ಆಶ್ರಯದಲ್ಲಿ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಪೇಜಾವರಶ್ರೀ ವಿಶ್ವೇಶತೀರ್ಥ ಶ್ರೀಪಾಂದಗಳವರ ಪಂಚಮ ಪಾದುಕಾ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀಗಳದ್ದು ಜಾತಿಭೇದ ಮರೆತು ಎಲ್ಲ ಸಮಾಜವು ಒಗ್ಗಟ್ಟಾಗಿರಲು ಬಯಸಿದವರು. ಅವರಲ್ಲಿ ಮೇಳು, ಕೀಳು ಎಂಬ ಭಾವನೆ ಎಂದಿಗೂ ಮೂಡಲಿಲ್ಲ. ಅವರದು ಹೃದಯದಿಂದಲೇ ನಿರ್ಮಾಣವಾಗಿದ್ದ ದೇಹವಾಗಿತ್ತು. ಅಂತಹ ಶ್ರೀಗಳ ದರ್ಶನದ ಸೌಭಾಗ್ಯ ದೊರೆತಿರುವುದೇ ನಮ್ಮ ಪುಣ್ಯ ಎಂದರು.ಹಿಂದೂ ಸಮಾಜದ ಮೇಲೆ ಅಪಾರ ಕಾಳಜಿ ಹೊಂದಿದ್ದ ಶ್ರೀಗಳು ಸದಾಕಾಲ ಸಮಾಜದ ಒಳಿತಿಗಾಗಿ ಶ್ರಮಿಸಿದವರು. 1970ರಲ್ಲಿ ದಲಿತ ಕೇರಿ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಹೊಸಕ್ರಾಂತಿಗೆ ಮುನ್ನುಡಿ ಹಾಕಿದವರು. ಅವರು ಅಂದು ಈ ಕ್ರಾಂತಿಗೆ ಮುನ್ನುಡಿ ಬರೆಯದೇ ಇದ್ದಿದ್ದರೆ. ಈಗ ಹಿಂದೂ ಸಮಾಜ ಒಂದಾಗಿ ಇರುತ್ತಿರಲಿಲ್ಲ ಎಂದು ಹೇಳಿದರು.
ಮಧ್ವ ಸಮಾಜ ಒಂದಾಗಿ ಅಭಿವೃದ್ಧಿಗೊಳ್ಳಲು ಕಾರಣರಾದವರೇ ಪೇಜಾವರ ಶ್ರೀ. ಒಂದೊಂದು ದಿಕ್ಕಿಗೆ ಮುಖ ಮಾಡಿದ್ದ 23 ಯತಿಗಳನ್ನು ಒಂದೆಡೆ ಸೇರಿಸಿ ಮಧ್ವ ಮಹಾಮಂಡಳದ ಸ್ಥಾಪನೆ ಮಾಡುವುದರೊಂದಿಗೆ ಸಮಾಜ ಸಂಘಟನೆಗೆ ಪ್ರಮುಖ ಕಾರಣರಾದರು ಎಂದರು.ಅತಿಥಿಗಳಾಗಿ ಆಗಮಿಸಿದ್ದ ಡಾ. ವಿಕ್ರಮಸಿಂಹಾಚಾರ್ಯ ಮಾತನಾಡಿ, ಪೇಜಾವರ ಶ್ರೀಗಳಲ್ಲಿ ಶ್ರೀರಾಮನ ಗುಣಗಳಿದ್ದವು. ಶ್ರೀಗಳು ಸದಾಕಾಲ ದೇವರ ಉಪಾಸನೆ ಮಾಡುತ್ತಿರುವುದರಿಂದ ಅವರ ಕಾಂತಿ ಎಂದಿಗೂ ಕುಂದಲಿಲ್ಲ. ಸೌಮ್ಯ ಸ್ವರೂಪಿಯಾಗಿದ್ದ ಅವರು ಸದಾಕಾಲ ಭಕ್ತರ ಏಳ್ಗೆಗೆ ತಮ್ಮ ಜೀವನ ಮುಡಿಪಾಗಿಟ್ಟವರು ಎಂದರು.
ಡಾ. ಶಾಮಾಚಾರ್ಯ ಬಂಡಿ ಮಾತನಾಡಿ, ದಲಿತ ಕೇರಿಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಪೇಜಾವರ ಶ್ರೀಗಳು ಹೊಸ ಕ್ರಾಂತಿಯ ಅಲೆ ಎಬ್ಬಿಸಿದರು ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಆಶೀರ್ವಚನ ನೀಡಿದರು. ಪಂಡಿತರಾದ ಡಾ. ರಂಗನಾಥ ಕಟ್ಟಿ ಮಾತನಾಡಿದರು. ಡಾ. ಸತ್ಯಮೂರ್ತಿ ಆಚಾರ್ಯ ನಿರೂಪಿಸಿದರು.ಅದ್ಧೂರಿ ಶೋಭಾಯಾತ್ರೆ:
ನಗರದ ಚಿನ್ಮಯ ಸ್ಕೂಲ್ ಹತ್ತಿರವಿರುವ ಆಂಜನೇಯ ದೇವಸ್ಥಾನದಿಂದ ಭವಾನಿ ನಗರದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವರೆಗೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಅದ್ಧೂರಿ ಶೋಭಾಯಾತ್ರೆ ನಡೆಯಿತು. ಈ ವೇಳೆ ಸಾವಿರಾರು ಜನರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮೆರಗು ತಂದರು.;Resize=(128,128))
;Resize=(128,128))
;Resize=(128,128))