ಮೈ ನವಿರೇಳಿಸುವ ಅಂತಾರಾಜ್ಯ ಟಗರು ಕಾಳಗ

| Published : Feb 15 2024, 01:31 AM IST

ಸಾರಾಂಶ

ಬೇನಾಳ ಆರ್.ಎಸ್. ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆಯ ಅಂಗವಾಗಿ ಅಂತಾರಾಜ್ಯ ಟಗರು ಕಾಳಗ ಹಮ್ಮಿಕೊಂಡಿದ್ದು, ಈ ಟಗರು ಕಾಳಗ ನೋಡುಗರ ಮೈ ನವಿರೇಳುವಂತೆ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಬೇನಾಳ ಆರ್.ಎಸ್. ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆಯ ಅಂಗವಾಗಿ ಅಂತಾರಾಜ್ಯ ಟಗರು ಕಾಳಗ ಹಮ್ಮಿಕೊಂಡಿದ್ದು, ಈ ಟಗರು ಕಾಳಗ ನೋಡುಗರ ಮೈ ನವಿರೇಳುವಂತೆ ಮಾಡುತ್ತಿದೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ದಾವಣಗೆರೆ, ಯಾದಗಿರಿ ಸೇರಿದಂತೆ ವಿವಿಧ ಕಡೆಗಳಿಂದ ಸುಮಾರು 180ಕ್ಕೂ ಅಧಿಕ ಟಗರುಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ.

ಗೆದ್ದ ಟಗರುಗಳಿಗೆ ಭರ್ಜರಿ ಬಹುಮಾನ:

ಟಗರು ಕಾಳಗದಲ್ಲಿ ಮುದ್ದೇಬಿಹಾಳ ತಾಲೂಕಿನ ಕೇಸಾಪುರದ ಗಿಡ್ಡ ಹೆಸರಿನ ಟಗರು ಪ್ರಥಮ ಸ್ಥಾನ ಪಡೆಯಿತು. ಅದರ ಮಾಲೀಕ ಪ್ರವೀಣ ಪ್ರಥಮ ಬಹುಮಾನ ರಾಯಲ್ ಎನ್‌ಫೀಲ್ಡ್ ಬೈಕ್ ತಮ್ಮದಾಗಿಸಿಕೊಂಡರು. ಬಾಗಲಕೋಟೆ ಬಳಿಯ ಗದ್ದನಕೇರಿಯ ಕಿರಣ ಗರುಡ ಟಗರು ದ್ವಿತೀಯ ಸ್ಥಾನ ಪಡೆದಿದ್ದು, ₹1.30 ಲಕ್ಷ ಮೌಲ್ಯದ ಹೊಂಡಾ ಬೈಕ್, ಮುದ್ದೇಬಿಹಾಳ ತಾಲೂಕಿನ ಕಿಲ್ಲಾರಹಟ್ಟಿಯ ಅಮರಪ್ಪ ಮದರಿ ಎರಡು ಟಗರು ತೃತೀಯ ಸ್ಥಾನ ಹಾಗೂ ಚತುರ್ಥ ಸ್ಥಾನ ಪಡೆದಿದ್ದು, ತೃತೀಯ ಬಹುಮಾನ ₹1 ಲಕ್ಷ ಮೌಲ್ಯದ ಬೈಕ್ ಹಾಗೂ ಚತುರ್ಥ ಬಹುಮಾನ ₹ 10 ಸಾವಿರ ಪಡೆದವು.

ಇನ್ನುಳಿದಂತೆ 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ 8 ಹಲ್ಲಿನ ವಿಭಾಗದ ಟಗರಿನ ಕಾಳಗ ಪ್ರತ್ಯೇಕವಾಗಿ ನಡೆದಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಮೊದಲ ಬಹುಮಾನ ₹ 3 ಲಕ್ಷ ಬುಲೆಟ್ ಹಾಗೂ ದ್ವಿತೀಯ ₹ 1.5 ಲಕ್ಷ ಬೈಕ್ ಪಡೆದವು. ಇನ್ನು ಬಹುಮಾನದ ಪ್ರಾಯೋಜಕತ್ವ ನೀಡಿದ ಸುರಪುರದ ಬಬ್ಲುಗೌಡ ನಾಯಕರನ್ನು ಬೇನಾಳ ಗ್ರಾಮಸ್ಥರು ₹ 60 ಸಾವಿರ ಮೌಲ್ಯದ ಹಸುವನ್ನ ನೀಡಿ ಗೌರವಿಸಿದರು.

ಸಚಿವ ಶಿವಾನಂದ ಪಾಟೀಲರ ಪುತ್ರ ಸತ್ಯಜೀತಗೌಡ ಪಾಟೀಲ, ಬಬ್ಲುಗೌಡ ನಾಯಕ, ಗ್ರಾಪಂ ಅಧ್ಯಕ್ಷ ರಮೇಶ ವಂದಾಲ, ಜಿ.ಸಿ.ಮುತ್ತಲದಿನ್ನಿ, ಬಿ.ಎಚ್. ಗಣಿ, ಬುಡ್ಡೇಸಾಬ್ ಬಾಗವಾನ, ಸಂಗಪ್ಪ ಹಂಡರಗಲ್ಲ, ಟಿ.ಎಸ್.ಬಿರಾದಾರ, ಶಿವಾನಂದ ಅಲ್ಲೂರ, ರಮೇಶ ಆಲಮಟ್ಟಿ, ಮುದಕಣ್ಣ ಹೂಗಾರ, ಪರಶುರಾಮ ವಾಲೀಕಾರ, ಬಾಬುಗೌಡ ಮಸೂತಿ, ಮಹೇಶ ಗಾಳಪ್ಪಗೋಳ, ರವಿ ಕಾಳಗಿ, ಚಂದ್ರಶೇಖರ ನಕ್ಕರಗುಂದಿ, ಲಕ್ಷ್ಮಣ ಚನಗೊಂಡ ಸೇರಿ ಹಲವರು ಭಾಗವಹಿಸಿದ್ದರು.

ಬೇನಾಳ ಆರ್.ಎಸ್. ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆಯ ಅಂಗವಾಗಿ ಅಂತಾರಾಜ್ಯ ಟಗರು ಕಾಳಗ ಹಮ್ಮಿಕೊಂಡಿದ್ದು, ಈ ಟಗರು ಕಾಳಗ ನೋಡುಗರ ಮೈ ನವಿರೇಳುವಂತೆ ಮಾಡುತ್ತಿದೆ.