ಕೈಗಾರಿಕೋದ್ಯಮಿ ರತನ್ ಟಾಟಾಗೆ ಭಾವಪೂರ್ಣ ಶ್ರದ್ಧಾಂಜಲಿ

| Published : Oct 11 2024, 11:53 PM IST

ಕೈಗಾರಿಕೋದ್ಯಮಿ ರತನ್ ಟಾಟಾಗೆ ಭಾವಪೂರ್ಣ ಶ್ರದ್ಧಾಂಜಲಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ನಗರದಲ್ಲಿರುವ ಹೊಸಹಳ್ಳಿ ಎಸ್.ಡಿ.ಜಯರಾಂ ಆಟೋ ನಿಲ್ದಾಣ ವೃತ್ತದಲ್ಲಿ ರತನ್ ಟಾಟಾ ಭಾವಚಿತ್ರಕ್ಕೆ ದೀಪ-ಪುಷ್ಪನಮನ ನೆರವೇರಿಸಿ, ಒಂದು ನಿಮಿಷ ಮೌನಾಚರಣೆಯೊಂದಿಗೆ ಸಂತಾಪ ಸೂಚಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತದ ಖ್ಯಾತ ಕೈಗಾರಿಕೋದ್ಯಮಿ ಮತ್ತು ಸಮಾಜ ಸೇವಕ ರತನ್ ಟಾಟಾ ನಿಧನಕ್ಕೆ ನಗರದ ಸರ್ ಎಂ.ವಿ. ಗೆಳೆಯರ ಬಳಗದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರದಲ್ಲಿರುವ ಹೊಸಹಳ್ಳಿ ಎಸ್.ಡಿ.ಜಯರಾಂ ಆಟೋ ನಿಲ್ದಾಣ ವೃತ್ತದಲ್ಲಿ ರತನ್ ಟಾಟಾ ಭಾವಚಿತ್ರಕ್ಕೆ ದೀಪ-ಪುಷ್ಪನಮನ ನೆರವೇರಿಸಿ, ಒಂದು ನಿಮಿಷ ಮೌನಾಚರಣೆಯೊಂದಿಗೆ ಸಂತಾಪ ಸೂಚಿಸಲಾಯಿತು.

ನಗರಸಭಾ ಮಾಜಿ ಸದಸ್ಯ ಶಿವಕುಮಾರ್ ಕೆಂಪಯ್ಯ ಮಾತನಾಡಿ, ರತನ್ ಟಾಟಾ ನಿಧನದಿಂದ ದೇಶಕ್ಕೆ ತುಂಬಲಾಗದ ನಷ್ಟವಾಗಿದೆ, ಲಕ್ಷಾಂತರ ಭಾರತೀಯರಿಗೆ ಟಾಟಾ ಉದ್ಯೋಗದಾತರಾಗಿದ್ದರು. ಕೋಟ್ಯಂತರ ಜನರ ಕುಟುಂಬಗಳಿಗೆ ಸಾಕಷ್ಟು ನೆರವು, ಸೇವಾಕಾರ್ಯಗಳನ್ನು ಮಾಡಿದ್ದರು ಎಂದು ಸ್ಮರಿಸಿದರು.

ಒಬ್ಬ ಕೈಗಾರಿಕೋದ್ಯಮಿ ಮಾದರಿಯಾಗಿ ಹೇಗೆ ಸಮಾಜಸೇವೆ ಮಾಡಬಹುದು ಎನ್ನುವುದಕ್ಕೆ ಮಾದರಿಯಾಗಿದ್ದರು. ದೇಶ ಕಾಯುವ ಸೈನಿಕರನ್ನು ಗೌರವಿಸಿ ಅವರಿಗೆ ಎಲ್ಲ ರೀತಿಯಲ್ಲೂ ನೆರವಾಗುತ್ತಿದ್ದರು, ರೈತಾಪಿ ವರ್ಗ ಬಳಸುವ ಸಾಕಷ್ಟು ಪರಿಕರಗಳನ್ನು ಕಡಿಮೆ ದರದಲ್ಲಿ ಲಭಿಸುವಂತೆ ಮಾಡಿದ್ದರು ಎಂದು ನುಡಿದರು.

ರತನ್ ಟಾಟಾ ಕೇವಲ ಕೈಗಾರಿಕೋದ್ಯಮಿಯಾಗಿರಲಿಲ್ಲ, ಬದಲಾಗಿ ಅವರು ಟಾಟಾ ಗ್ರೂಪ್‌ಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟ ವ್ಯಕ್ತಿಯಾಗಿದ್ದರು. ವ್ಯಾಪಾರದೊಂದಿಗೆ ಸಾಮಾಜಿಕ ಜವಾಬ್ದಾರಿಗಳಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದ ಭಾರತೀಯ ಉದ್ಯಮದ ಆಧಾರಸ್ತಂಭವಾಗಿದ್ದರು. ಅವರ ಜೀವನವು ಹೋರಾಟ, ಸಮರ್ಪಣೆ ಮತ್ತು ಹೊಸತನದ ಸಂಕೇತವಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಗೆಳೆಯರ ಬಳಗದ ಹೊಸಹಳ್ಳಿ ಶಿವು, ಸಚಿನ್, ಆನಂದ್, ವೈರಮುಡಿ, ಅನಿಲ್ ಮತ್ತಿತರರಿದ್ದರು.ಕೈಗಾರಿಕೋದ್ಯಮಿ ರತನ್ ಟಾಟಾಗೆ ಶ್ರದ್ಧಾಂಜಲಿ

ಶ್ರೀರಂಗಪಟ್ಟಣ:ದೇಶದ ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಕುವೆಂಪು ವೃತ್ತದ ಬಳಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಪದಾಧಿಕಾರಿಗಳು ರತನ್ ಟಾಟಾ ಭಾವಚಿತ್ರವುಳ್ಳ ಫ್ಲೆಕ್ಸ್‌ಗೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.ನಂತರ ಶಂಕರ್ ಬಾಬು ಮಾತನಾಡಿ, ಕೈಗಾರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದ ರತನ ಟಾಟಾ ನಿಧನದ ವಿಷಯ ಬೇಸರ ತರಿಸಿದೆ. ಅವರು ದೇಶದ ಸಹಸ್ರಾರು ಮಂದಿಗೆ ಉದ್ಯೋಗ ನೀಡಿ, ಅವರ ಪಾಲಿಗೆ ಅನ್ನದಾತರಾಗಿದ್ದರು ಎಂದು ಸ್ಮರಿಸಿದರು.

ಈ ವೇಳೆ ವೇದಿಕೆ ಪದಾಧಿಕಾರಿಗಳಾದ ಬಾಳೆ ಮಂಜು, ಜಗದೀಶ್ ಗೌಡ, ಛಾಯಾದೇವಿ, ಕುಮಾರ್ ಸೇರಿದಂತೆ ಇತರರು ಇದ್ದರು.