ಸಾರಾಂಶ
ಕನ್ನಡಪ್ರಭ ವಾರ್ತೆ ಸರಗೂರುಮೇಯಲು ಹೋಗಿ ನಾಪತ್ತೆಯಾದ ಎತ್ತುಗಳನ್ನು ಜಮೀನಿನಲ್ಲಿ ಹುಡುಕುತ್ತಿರುವಾಗ ರೈತನ ಮೇಲೆ ಕಾಡುಹಂದಿ ದಾಳಿ ನಡೆಸಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾದನೂರು ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಹಾದನೂರು ಗ್ರಾಮದ ನಿವಾಸಿ ಸುನಿಲ್ ಕುಮಾರ್ (35) ಗಾಯಗೊಂಡವರು. ಎರಡು ದಿನಗಳ ಹಿಂದೆ ಮೇಯಲು ಎತ್ತುಗಳನ್ನು ಜಮೀನಿನಲ್ಲಿ ಬಿಡಲಾಗಿದ್ದು, ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಹೀಗಾಗಿ ಜಮೀನಿನಲ್ಲಿ ಹುಡುಕುತ್ತಿರುವಾಗ ಅಲ್ಲಿಯೇ ಮಲಗಿದ್ದ 15ಕ್ಕೂ ಹೆಚ್ಚು ಕಾಡುಹಂದಿಗಳ ಹಿಂಡು ರೈತ ಸುನಿಲ್ ಕುಮಾರ್ ಅವರನ್ನು ಕಂಡು ಹೆದರಿ ಓಡಿ ಹೋಗಿವೆ. ಆ ಪೈಕಿ ಒಂದು ಕಾಡುಹಂದಿ ರೈತನ ಮೇಲೆ ಏಕಾಏಕಿ ದಾಳಿ ನಡೆಸಿ, ತನ್ನ ಕೊಂಬಿನಿನಂತ ಕೋರೆ ಹಲ್ಲಿನಿಂದ ತಿವಿದು ಕೆಡವಿ ಬಾಯಿಯಿಂದ ಕಚ್ಚಿ ಎಳೆದಾಡಿದೆ.ಇದರಿಂದ ಗಾಬರಿಗೊಂಡ ಸುನಿಲ್ ಕುಮಾರ್ ಜೋರಾಗಿ ಕೂಗಿದ್ದಾರೆ. ಶಬ್ಧಕ್ಕೆ ಅಕ್ಕ, ಪಕ್ಕದಲ್ಲಿದ್ದ ಗ್ರಾಮಸ್ಥರು ಬಂದು ಬೆದರಿಸಿದಾಗ ಹಂದಿ ಕಾಡಿನತ್ತ ಪರಾರಿಯಾಗಿದೆ. ನಂತರ ರಕ್ತದ ಮಡುವಿನಲ್ಲಿ ಪ್ರಜ್ಞಾನಹೀನನಾಗಿ ಬಿದ್ದಿದ್ದ ಸುನಿಲ್ ಕುಮಾರ್ ನನ್ನು ಅರಣ್ಯ ಇಲಾಖಾಧಿಕಾರಿಗಳ ಸಹಕಾರದಿಂದ ಹತ್ತಿರದ ಬಡಗಲಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೂಕ್ತ ಚಿಕಿತ್ಸೆಗೆ ಒತ್ತಾಯ:ರೈತ ಸುನಿಲ್ ಕುಮಾರ್ ಅವರು ತುಂಬಾ ಕಡುಬಡವರಾಗಿದ್ದು, ಕುಟುಂಬದ ನಿರ್ವಹಣೆಗೆ ತುಂಬಾ ಕಷ್ಟಕರವಾಗಿದೆ. ಹೀಗಾಗಿ ಇಲಾಖೆ ಸೂಕ್ತ ಚಿಕಿತ್ಸೆ ನೀಡಬೇಕು. ಗುಣಮುಖರಾಗುವವರೆಗೆ ಕುಟುಂಬದ ನಿರ್ವಹಣೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದರು. ಗ್ರಾಪಂ ಸದಸ್ಯರಾದ ಶಿವರಾಜು, ಶಿವಲಿಂಗಯ್ಯ, ಮುಖಂಡರಾದ ಅಂಗಡಿ ರಾಜಣ್ಣ. ನಿಂಗರಾಜು, ಸ್ವಾಮಿ, ಗುರುಸ್ವಾಮಿ, ಚಿಕ್ಕಣ್ಣ ಇದ್ದರು.ಚಿರತೆ ದಾಳಿಗೆ ಎರಡು ಕುರಿಗಳು ಬಲಿಕನ್ನಡಪ್ರಭ ವಾರ್ತೆ ನಂಜನಗೂಡುಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿ ಎರಡು ಕುರಿಗಳನ್ನು ತಿಂದು ಹಾಕಿರುವ ಘಟನೆ ತಾಲೂಕಿನ ಎಲಚಗೆರೆ ಗ್ರಾಮದಲ್ಲಿ ಜರುಗಿದೆ.ಎಲಚಗೆರೆ ಗ್ರಾಮದ ರೈತ ದೊರೆಸ್ವಾಮಿ ತಮ್ಮ ಕೊಟ್ಟಿಗೆಯಲ್ಲಿ ಕುರಿಗಳನ್ನು ಕಟ್ಟಿ ಹಾಕಿದ್ದರು. ಕೊಟ್ಟಿಗೆಗೆ ಬಾಗಿಲು ಇಲ್ಲದ ಕಾರಣ ಬುಧವಾರ ಮಧ್ಯರಾತ್ರಿ ಎರಡು ಗಂಟೆ ಸಮಯದಲ್ಲಿ ಒಳ ನುಗ್ಗಿದ ಚಿರತೆ ಒಂದು ಕುರಿಯನ್ನು ಪೂರ್ಣವಾಗಿ ತಿಂದು ಮುಗಿಸಿದೆ. ಮತ್ತೊಂದು ಕುರಿಯನ್ನು ಅರ್ಧ ತಿಂದು ಪರಾರಿಯಾಗಿದೆ.ಈ ಭಾಗದಲ್ಲಿ ಜನ ನಿತ್ಯ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಜೀವಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಆದರಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿಯಬೇಕು ಮತ್ತು ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.ಸ್ಥಳಕ್ಕೆ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ನಿತಿನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.