ಸಾರಾಂಶ
ಕನ್ನಡಪ್ರಭ ವಾರ್ತೆ ಸರಗೂರುಕಾಡಾನೆ ದಾಳಿ ನಡೆಸಿ ಯುವಕನನ್ನು ಬಲಿ ಪಡೆದಿರುವ ಘಟನೆ ಸರಗೂರು ತಾಲೂಕಿನ ಗದ್ದೇಹಳ್ಳ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಗ್ರಾಮದ ಕಾಂತನಾಯಕ ಎಂಬವರ ಪುತ್ರ ಅವಿನಾಶ್ (24) ಆನೆ ದಾಳಿಗೆ ಬಲಿಯಾದ ದುರ್ದೈವಿ.ಅವಿನಾಶ್ ಗುರುವಾರ ಬೆಳಗ್ಗೆ ಸುಮಾರು 6ರ ಸಮಯದಲ್ಲಿ ಜಮೀನಿಗೆ ನೀರು ಹಾಯಿಸ ಬಂದ ವೇಳೆ, ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆಗಳ ಗುಂಪೊಂದು ಏಕಾಏಕಿ ಮೇಲೆ ದಾಳಿ ನಡೆಸಿವೆ. ಇದರಿಂದ ಅವಿನಾಶ್ ತಲೆಗೆ ಗಂಭೀರ ಗಾಯಗಳಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಬಿ.ಎಸ್ಸಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು ತಯಾರಿ ಮಾಡಿಕೊಂಡಿದ್ದರು.ಈ ಭಾಗದಲ್ಲಿ ಬೆಳಗಿನ ಜಾವ ವಿದ್ಯುತ್ ಮೋಟಾರ್ ಲೈನ್ ನೀಡುತ್ತಿದ್ದು, ಮುಂಜಾನೆಯೇ ಜಮೀನಿಗಳಿಗೆ ಹೋಗಿ ರೈತರು ನೀರು ಹಾಯಿಸಬೇಕು. ಹೀಗಾಗಿ ಅವಿನಾಶ್ ತೆರಳಿದ್ದಾರೆ. ಈ ವೇಳೆ ಕಾಡಾನೆಗಳ ಗುಂಪು ಯುವಕನ ಮೇಲೆ ದಾಳಿ ನಡೆಸಿವೆ ಎನ್ನಲಾಗಿದೆ. ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಮೋಟರ್ ಲೈನ್ ಅನ್ನು ರಾತ್ರಿ ವೇಳೆ ನೀಡದೆ ಮುಂಜಾನೆಯ ವೇಳೆ ನೀಡಿ ಎಂದು ಅಧಿಕಾರಿಗಳ ಗಮನಕ್ಕೆ ತಂದರೂ ಅವರು ನಡುರಾತ್ರಿ ಅಥವಾ ಬೆಳಗಿನ ಜಾವ 4 ಅಥವಾ 5 ಕ್ಕೆ ಮೋಟರ್ ಲೈನ್ ನೀಡುತ್ತಾರೆ. ಈ ವೇಳೆ ನೀರು ಹಾಯಿಸಲು ಹೋದ ರೈತರು ಕಾಡುಪ್ರಾಣಿಗಳಿಗೆ ಬಲಿಯಾಗುತ್ತಿದ್ದಾರೆ. ಅರಣ್ಯ ಇಲಾಖೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಿಲ್ಲಇನ್ನು ಕಾಡುಪ್ರಾಣಿಗಳ ಹಾವಳಿ ತಪ್ಪಿಸಿ, ಕಾಡಾನೆಗಳು ಬರುವ ಕಡೆ ರೈಲ್ವೆ ಕಂಬಿ ಬ್ಯಾರೀಕೇಡ್ ಬಿಗಿ ಗೊಳಿಸುವಂತೆ ಅರಣ್ಯ ಇಲಾಖೆಯವರಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಭಾಗದಲ್ಲಿ ಆಗಾಗ್ಗೆ ಸಾವು, ನೋವುಗಳು ಸಂಭವಿಸುತ್ತಿದ್ದು, ಇದಕ್ಕೆಲ್ಲ ಅಧಿಕಾರಿಗಳೇ ನೇರ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸೂಕ್ತ ಪರಿಹಾರಕ್ಕೆ ಆಗ್ರಹಇದೇ ವೇಳೆ ಕೆಲ ಕಾಲ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಮೃತ ಅವಿನಾಶ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು, ಗ್ರಾಮಸ್ಥರು ಆಗ್ರಹಿಸಿದರು.ಜಮೀನಿನಲ್ಲಿ ಕಾಡು ಪ್ರಾಣಿಗಳು ಮೃತಪಟ್ಟರೆ ರೈತರ ಮೇಲೆ ಪ್ರಕರಣ ದಾಖಲಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸುತ್ತಾರೆ. ಅದೇ ರೈತ ಮೃತಪಟ್ಟರೆ ತಡವಾಗಿ ಬರುತ್ತಾರೆ. ಇದು ಬೇಜಾವಾಬ್ದಾರಿಯಲ್ಲದೆ ಮತ್ತೇನು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸೂಕ್ತ ಪರಿಹಾರ, ಉದ್ಯೋಗ ನೀಡಲು ಚಿಕ್ಕಣ್ಣ ಆಗ್ರಹಇದೇ ವೇಳೆ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮಾತನಾಡಿ, ರೈಲ್ವೆ ಬ್ಯಾರಿಕೇಡ್ ಗಳನ್ನು ದಾಟಿ ಕಾಡಾನೆಗಳು ಕಾಡಂಚಿನ ಜಮೀನುಗಳಿಗೆ ಬರುತ್ತಿವೆ. ಬೆಳೆಗಳನ್ನು ನಾಶ ಮಾಡುವ ಜತೆಗೆ ಪ್ರಾಣಹಾನಿಯನ್ನೂ ಮಾಡುತ್ತಿವೆ. ಇದಕ್ಕೆಲ್ಲ ಅರಣ್ಯ ಇಲಾಖೆ ಶಾಶ್ವತ ಪರಿಹಾರ ನೀಡಬೇಕು. ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ಕುಟುಂಬಸ್ಥರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ಬಡಕುಟುಂಬವಾದ್ದರಿಂದ ತಹಸೀಲ್ದರ್ ಅವರು ಕುಟುಂಬಕ್ಕೆ ಒಂದು ಮನೆ ನೀಡಬೇಕು ಎಂದರು. 15 ಲಕ್ಷ ರು. ಪರಿಹಾರದ ಚೆಕ್ ವಿತರಿಸಿದ ಡಿಸಿಎಫ್‌ಬಳಿಕ ಬಂಡೀಪುರ ಡಿಸಿಎಫ್ ಪ್ರಭಾಕರನ್ ಮಾತನಾಡಿ, ಯುವಕ ಕಾಡಾನೆ ದಾಳಿಗೆ ಬಲಿಯಾಗಿರುವುದು ನಮಗೂ ನೋವು ತಂದಿದೆ. ಸರ್ಕಾರದಿಂದ 15 ಲಕ್ಷ ರು. ಪರಿಹಾರ ನೀಡಲು ಅವಕಾಶ ಇದೆ, ಅದರಂತೆ 15 ಲಕ್ಷ ರು. ಪರಿಹಾರದ ಚೆಕ್ ವಿತರಿಸಲಾಯಿತು. ಜೊತೆಯಲ್ಲಿ ಕಚೇರಿಯಲ್ಲಿ ಅವರ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ನಮ್ಮ ಸಿಬ್ಬಂದಿಗಳಿಗೆ ರಾತ್ರಿ ವೇಳೆಯಲ್ಲಿ ಗಸ್ತು ಮಾಡಲು ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿ, ಪರಿಹಾರದ ಚಿಕ್ ವಿತರಿಸಿದರು. ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು- ಚಂದನ್ ಗೌಡಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಚಂದನ್ ಗೌಡ ಮಾತನಾಡಿ, ಮಾನವ ಪ್ರಾಣಿ ಸಂಘರ್ಷದಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಸರ್ಕಾರ ಕೂಡಲೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು, ಮಾನವ ಪ್ರಾಣಿ ಸಂಘರ್ಷಣೆಗೆ ಶಾಶ್ವತ ಸಮಸ್ಯೆಗೆ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿ ಇತ್ತೀಚಿನ ದಿನಗಳಲ್ಲಿ ಬಂಡಿಪುರ ಹಾಗೂ ನಾಗರಹೊಳೆ ವ್ಯಾಪ್ತಿ ಪ್ರದೇಶದಲ್ಲಿ ಕಾಡಾನೆ ದಾಳಿ ತಪ್ಪಿಸಲು ವಿಶೇಷ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚಿಸಿ, ಕಾಡಂಚಿನ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ರೈತರ ಪ್ರಾಣವನ್ನು ಉಳಿಸಿ, ಕಾಪಾಡಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳದಲ್ಲೇ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಸಾಗರೆ ವೈದ್ಯಾಧಿಕಾರಿ ಡಾ. ಕಿರಣ್ ಕುಮಾರ್, ಸಿಬ್ಬಂದಿ ರಾಜಮ್ಮ, ರವಿ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು..ಇದೇ ವೇಳೆ ತಹಸೀಲ್ದಾರ್ ಮೋಹನಕುಮಾರಿ, ರಾಜ್ಯ ಯುವ ಘಟಕದ ಉಪಾಧ್ಯಕ್ಷ ಎಸ್.ಬಿ. ಸಮಂತ್, ಎಚ್.ಡಿ. ಕೋಟೆ ತಾಲೂಕಿನ ಅಧ್ಯಕ್ಷ ಉಮೇಶ್, ಸರಗೂರು ತಾಲೂಕಿನ ಅಧ್ಯಕ್ಷ ಲೋಕೇಶ್, ಸಹ ಕಾರ್ಯದರ್ಶಿ ನಾಗೇಶ್, ಗ್ರಾಪಂ ಸದಸ್ಯರಾದ ಸೋಮಣ್ಣ, ರವಿಅರಸ್, ಮಹದೇವನಾಯಕ, ಶಂಭುಲಿಂಗನಾಯಕ, ಪುರದಕಟ್ಟೆ ಬಸವರಾಜು, ಅಂಕನಾಯಕ, ಸಿಪಿಐ ಪ್ರಸನ್ನ ಕುಮಾರ್, ಶಬಿರ್ ಹುಸೇನ್, ಲೋಲಾಕ್ಷಿ, ಸಂತೋಷ ಕಶ್ಯಪ್, ಎಸ್.ಐ ಕಿರಣ್ ಕುಮಾರ್ , ಚಂದ್ರಹಾಸ್ ನಾಯಕ್, ದಾಸನಾಯಕ, ಎಸಿಎಫ್ ಸತೀಶ್, ಆರ್ಎಫ್ಓ ವೀವೇಕ್, ಮುನಿರಾಜು, ಅಮೃತೇಶ್, ಮಂಜುನಾಥ್, ಜಿಪಂ ಮಾಜಿ ಸದಸ್ಯರಾದ ಕೆ. ಚಿಕ್ಕವೀರನಾಯಕ, ಪಿ. ರವಿ, ರಾಜನಾಯಕ, ಕಂದೇಗಾಲ ಸೋಮಣ್ಣ, ಪಟೇಲ್ ರಾಜಪ್ಪ, ಮಲ್ಲೇಶ್, ಸುಧೀರ್, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.ಸರಗೂರಿನ ಸಿಪಿಐ ಪ್ರಸನ್ನ ಕುಮಾರ್ ಅವರ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಹೆಚ್ಚಿನ ರೀತಿಯಲ್ಲಿ ಪೊಲೀಸ್ ವ್ಯವಸ್ಥೆ ಮಾಡಿದ್ದರು.ಎಲ್ಲ ಪಕ್ಷದ ರಾಜಕೀಯ ಮುಖಂಡರು, ರೈತರು, ಅಕ್ಕ ಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.