ಬಾಳೆ ಬೆಳೆ ತುಳಿದು ನಾಶ ಮಾಡಿದ ಕಾಡಾನೆಗಳ ಹಿಂಡು

| Published : Feb 28 2025, 12:49 AM IST

ಸಾರಾಂಶ

ಬೇಲೂರು ತಾಲೂಕಿನ ಅರೇಹಳ್ಳಿ ಸಮೀಪದ ಮಾಲಹಳ್ಳಿ ಕಾಫಿ ತೋಟದ ಕೆರೆಯಲ್ಲಿ ಬುಧವಾರ ರಾತ್ರಿ 15ಕ್ಕೂ ಹೆಚ್ಚು ಆನೆಗಳು ಈಜಾಡುವುದರ ಜೊತೆಗೆ ಕಾಫಿ, ಅಡಿಕೆ, ಮೆಣಸು ಹಾಗೂ ಬಾಳೆಗಿಡಗಳ ಫಸಲನ್ನು ನಾಶ ಮಾಡಿದ್ದು ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಈ ಬಗ್ಗೆ ಕಾಫಿ ತೋಟದ ಮಾಲೀಕ ಚಂದ್ರು ಮಾತನಾಡಿ, ನಮ್ಮ ತೋಟಕ್ಕೆ 15ಕ್ಕೂ ಹೆಚ್ಚು ಆನೆಗಳು ಬುಧವಾರ ರಾತ್ರಿ ಲಗ್ಗೆ ಇಟ್ಟಿವೆ. ಕಷ್ಟಪಟ್ಟು ಬೆಳೆದಿದ್ದ ಕಾಫಿ ಗಿಡ, ಬಾಳೆ ಗಿಡ ಹಾಗೂ ಅಡಿಕೆ ಮರಗಳನ್ನು ನಾಶ ಮಾಡಿದ್ದು ಅಂದಾಜು 5 ಲಕ್ಷ ರು. ಬೆಳೆ ಹಾನಿ ಸಂಭವಿಸಿದೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅರೇಹಳ್ಳಿ ಸಮೀಪದ ಮಾಲಹಳ್ಳಿ ಕಾಫಿ ತೋಟದ ಕೆರೆಯಲ್ಲಿ ಬುಧವಾರ ರಾತ್ರಿ 15ಕ್ಕೂ ಹೆಚ್ಚು ಆನೆಗಳು ಈಜಾಡುವುದರ ಜೊತೆಗೆ ಕಾಫಿ, ಅಡಿಕೆ, ಮೆಣಸು ಹಾಗೂ ಬಾಳೆಗಿಡಗಳ ಫಸಲನ್ನು ನಾಶ ಮಾಡಿದ್ದು ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.

ಅರೇಹಳ್ಳಿ ಪಟ್ಟಣದ ಪ್ಲಾಂಟರ್ಸ್ ಕ್ಲಬ್ ಸಮೀಪ ಕಾಣಿಸಿಕೊಂಡಿದ್ದ ಕಾಡಾನೆಗಳ ಗುಂಪು ನಂತರ ಅಕ್ಕಪಕ್ಕದ ತೋಟಗಳ ಮೂಲಕ ಹಾದು ಮಾಲಹಳ್ಳಿಯ ಎಚ್. ಎನ್. ಚಂದ್ರು ಎಂಬುವರ ಎಸ್ಟೇಟ್‌ನಲ್ಲಿರುವ ಕೆರೆಯಲ್ಲಿ ಜಲವಿಹಾರ ನಡೆಸಿವೆ. ತೋಟದಲ್ಲಿ ದಾಂದಲೆ ನಡೆಸಿ ಕಾಫಿ ಗಿಡಗಳು, ಅಡಿಕೆ ಮರಗಳು, ಹಾಗೂ ಬಾಳೆ ಗಿಡಗಳ ಫಸಲನ್ನು ನಾಶಪಡಿಸಿವೆ.

ಕಳೆದ ಎರಡು ದಿನಗಳ ಹಿಂದೆ ಅರೇಹಳ್ಳಿ ಸಮೀಪ ಬ್ಯಾದನೆಯಲ್ಲಿ ಒಂಟಿ ಕಾಡಾನೆಯೊಂದು ಅನಿಲ್ ಅರಸ್ ಎಂಬ ಯುವಕನನ್ನು ಬಲಿಪಡೆದಿತ್ತು. ಕಾಡಾನೆಗಳ ಸ್ಥಳಾಂತರಕ್ಕೆ ಒತ್ತಾಯಿಸಿ ಕಾಫಿ ಬೆಳೆಗಾರರು ರೈತರು ಶಾಸಕರು ಉಗ್ರ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಇನ್ನೆರಡು ದಿನಗಳಲ್ಲಿ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಅಷ್ಟರೊಳಗೆ ಇದೇ ಅರೇಹಳ್ಳಿ ಸಮೀಪವೇ ಮತ್ತೆ ಕಾಡಾನೆಗಳ ಹಿಂಡು ದಾಳಿ ನಡೆಸಿರುವುದು ಕಾಫಿ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರಲ್ಲಿ ಆತಂಕ ಹೆಚ್ಚಿಸಿದೆ.

ಈ ಬಗ್ಗೆ ಕಾಫಿ ತೋಟದ ಮಾಲೀಕ ಚಂದ್ರು ಮಾತನಾಡಿ, ನಮ್ಮ ತೋಟಕ್ಕೆ 15ಕ್ಕೂ ಹೆಚ್ಚು ಆನೆಗಳು ಬುಧವಾರ ರಾತ್ರಿ ಲಗ್ಗೆ ಇಟ್ಟಿವೆ. ಕಷ್ಟಪಟ್ಟು ಬೆಳೆದಿದ್ದ ಕಾಫಿ ಗಿಡ, ಬಾಳೆ ಗಿಡ ಹಾಗೂ ಅಡಿಕೆ ಮರಗಳನ್ನು ನಾಶ ಮಾಡಿದ್ದು ಅಂದಾಜು 5 ಲಕ್ಷ ರು. ಬೆಳೆ ಹಾನಿ ಸಂಭವಿಸಿದೆ. ಆನೆಗಳು ಫಸಲನ್ನು ತಿಂದರೆ ನಮಗೆ ಬೇಜಾರಿಲ್ಲ, ಆದರೆ ಗಿಡಗಳನ್ನು ಬುಡ ಸಮೇತ ಕಿತ್ತು ಎಸೆಯುವುದು, ಮರಗಳನ್ನು ಉರುಳಿಸುವುದರಿಂದ ಮತ್ತೆ ಬೆಳೆ ಬೆಳೆಯಲು ಕಷ್ಟವಾಗುತ್ತದೆ. ಈಗಾಗಲೇ ಸಾಕಷ್ಟು ನಷ್ಟ ಉಂಟಾಗಿದ್ದು, ಕೆಳಗೆ ಬಿದ್ದ ಗಿಡಮರಗಳನ್ನು ನೋಡಿದರೆ ಕಣ್ಣೀರು ಬರುತ್ತಿದೆ. ಕೂಡಲೇ ತೋಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಅರಣ್ಯ ಇಲಾಖೆಯವರು ನಮಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.