ಶಾಂತ ಶಿವಯೋಗಿ ಮಠ ತಲುಪಿದ ಪರಂಪರಾ ಪಾದಯಾತ್ರೆ

| Published : Aug 05 2024, 12:42 AM IST

ಸಾರಾಂಶ

ಅಬ್ಬೆತುಮಕೂರಿನ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪರಂಪರಾ ಪಾದಯಾತ್ರೆ ಶನಿವಾರ ಹೆಡಗಿಮದ್ರಾದ ಶ್ರೀಶಾಂತ ಶಿವಯೋಗಿ ಮಠವನ್ನು ತಲುಪಿದೆ ಎಂದು ಮಠದ ವಕ್ತಾರ ಡಾ. ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಅಬ್ಬೆತುಮಕೂರಿನ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪರಂಪರಾ ಪಾದಯಾತ್ರೆ ಶನಿವಾರ ಹೆಡಗಿಮದ್ರಾದ ಶ್ರೀಶಾಂತ ಶಿವಯೋಗಿ ಮಠವನ್ನು ತಲುಪಿದೆ ಎಂದು ಮಠದ ವಕ್ತಾರ ಡಾ. ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.

ಗಂವ್ಹಾರದಿಂದ ಪ್ರಾರಂಭವಾದ ಪಾದಯಾತ್ರೆ ಸನ್ನತಿಯ ಚಂದ್ರಲಾಂಭ ದೇವಸ್ಥಾನವನ್ನು ತಲುಪಿ ಅಲ್ಲಿಯೇ ಪಾದಯಾತ್ರಿಗಳು ವಾಸ್ತವ್ಯ ಮಾಡಿದರು. ಬೆಳಗ್ಗೆ ಚಂದ್ರಲಾಂಭ ಪರಮೇಶ್ವರಿಗೆ ಡಾ. ಗಂಗಾಧರ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿ, 2ನೇ ದಿನದ ಪಾದಯಾತ್ರೆಯನ್ನು ಪ್ರಾರಂಭಿಸಿದರು.

2ನೇ ದಿನದ ಪಾದಯಾತ್ರೆ ಕನಗಾನಹಳ್ಳಿ ಮಾರ್ಗವಾಗಿ ಹೊರಟು ಊಳವಂಡಗೇರಾ ಗ್ರಾಮವನ್ನು ತಲುಪಿದಾಗ ಅಲ್ಲಿನ ಭಕ್ತರು ಶ್ರೀಗಳ ಪಾದಪೂಜೆಯನ್ನು ನೆರವೇರಿಸಿದರು. ಅಲ್ಲಿ ಏರ್ಪಡಿಸಿದ್ದ ಪ್ರಸಾದವನ್ನು ಪಾದಯಾತ್ರಿಗಳು ಸ್ವೀಕರಿಸಿ ಮುಂದೆ ಹೊರಟರು.

ಅಲ್ಲಿಂದ ಮುಂದೆ ಸಾಗಿದ ಪಾದಯಾತ್ರೆ ಬನ್ನೆಟ್ಟಿ ಗ್ರಾಮವನ್ನು ತಲುಪಿತು. ನಂತರ ವಿಶ್ವಾರಾಧ್ಯರ ದರ್ಶನ ಕಟ್ಟೆಯಲ್ಲಿ ಶಿವಲಿಂಗಪ್ಪ ಸಾಹು ಕೂಡಿ ಫರಹತಾಬಾದ್ ಹಾಗೂ ಅವರ ಬಳಗದವರು ಏರ್ಪಡಿಸಿದ್ದ ಪ್ರಸಾದವನ್ನು ಎಲ್ಲ ಭಕ್ತರೊಂದಿಗೆ ಶ್ರೀಗಳು ಸೇವನೆ ಮಾಡಿದರು.

ಹಾಗೆ ಮುಂದೆ ಹೊರಟ ಪಾದಯಾತ್ರೆ ತಳಕ ಗ್ರಾಮವನ್ನು ತಲುಪಿತು. ಅಲ್ಲಿ ಗ್ರಾಮದೇವತೆ ಹಾಗೂ ವೀರಾಂಜನೇಯ ಸ್ವಾಮಿ ಮಂದಿರದಲ್ಲಿ ಶ್ರೀಗಳು ವಿಶೇಷ ಪೂಜೆ ನೆರವೇರಿಸಿದರು.

ತಳಕ ಗ್ರಾಮದ ಭಕ್ತರ ಪ್ರಸಾದ ಸ್ವೀಕರಿಸಿ ಪಾದಯಾತ್ರಿಗಳು ಹೆಡಗಿಮದ್ರಾ ಗ್ರಾಮ ತಲುಪಿದರು. ಅಲ್ಲಿ ಮಲ್ಲರೆಡ್ಡಪ್ಪ ಸಾಹು ಅರಿಕೇರಿ ಮತ್ತು ಭೀಮರೆಡ್ಡಿ ಸಾಹುಕಾರ ಅವರ ಮನೆಯಲ್ಲಿ ಪಾದಯಾತ್ರಿಗಳು ಫಲಹಾರ ಸ್ವೀಕರಿಸಿ ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿ ಮಠವನ್ನು ತಲುಪಿದರು.

ಹೆಡಗಿಮದ್ರಾ ಮಠದಲ್ಲಿ ರಾತ್ರಿ ಇಡೀ ಭಜನೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬಸವಂತಪೂರದ ಶಿವು ಸಾಹುಕಾರ ಏರ್ಪಡಿಸಿದ ಪ್ರಸಾದವನ್ನು ಸ್ವೀಕರಿಸಿದ ಪಾದಯಾತ್ರಿಗಳು ಮಠದಲ್ಲಿ ವಾಸ್ತವ್ಯ ಹೂಡಿದರು.

3ನೇ ದಿನದ ಪಾದಯಾತ್ರೆ ಹೆಡಗಿಮದ್ರಾದ ಮಠದಲ್ಲಿ ಅಮಾವಾಸ್ಯೆಯ ಪೂಜಾ ವಿಧಾನಗಳನ್ನು ನೆರವೇರಿಸಿಕೊಂಡು ಹೋತಪೇಟೆಯ ಮಲರೆಡ್ಡಿಗೌಡ, ಶಹಾಪುರದ ಮರೆಪ್ಪಹಯ್ಯಾಳಕರ್ ಏರ್ಪಡಿಸುವ ಪ್ರಸಾದವನ್ನು ಸ್ವೀಕರಿಸಿ ಠಾಣಗುಂದಿ ಗ್ರಾಮವನ್ನು ತಲುಪುವುದು. ನಂತರ ಗ್ರಾಮಸ್ಥರು ಏರ್ಪಡಿಸುವ ಮಧ್ಯಾಹ್ನದ ಪ್ರಸಾದವನ್ನು ಸ್ವೀಕರಿಸಿ ಸಂಜೆ ಹೊತ್ತಿಗೆ ಅಬ್ಬೆತುಮಕೂರಿನ ಪಾದಗಟ್ಟೆಗೆ ತಲುಪಲಿದೆ ಎಂದು ಅವರು ತಿಳಿಸಿದ್ದಾರೆ.