ಎಸ್ಸೆಸ್ಸೆಲ್ಸಿ ಅಂಕಪಟ್ಟಿ ನಮೂದು ವೇಳೆ ಎಡವಟ್ಟು

| Published : May 10 2025, 01:12 AM IST

ಸಾರಾಂಶ

ಜಿಲ್ಲೆಯ ವಿದ್ಯಾರ್ಥಿಯೊಬ್ಬರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ ಮೌಲ್ಯಮಾಪಕರು, ಅಂಕಪಟ್ಟಿಗೆ ನಮೂದು ಮಾಡುವಾಗ 80 ಅಂಕದ ಬದಲು 34 ಎಂದು ತಪ್ಪಾಗಿ ದಾಖಲು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಆದಿಚುಂಚನಗಿರಿ ಶಾಲೆಯಲ್ಲಿ ಘಟನೆ । 80 ಅಂಕ ಬದಲು 34 ಅಂಕ ನಮೂದು

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯ ವಿದ್ಯಾರ್ಥಿಯೊಬ್ಬರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ ಮೌಲ್ಯಮಾಪಕರು, ಅಂಕಪಟ್ಟಿಗೆ ನಮೂದು ಮಾಡುವಾಗ 80 ಅಂಕದ ಬದಲು 34 ಎಂದು ತಪ್ಪಾಗಿ ದಾಖಲು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಆದಿಚುಂಚನಗಿರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ಜೀಶಾನ್ ಎಂಬ ವಿದ್ಯಾರ್ಥಿ ಪರೀಕ್ಷೆ ಬರೆದು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ಆದರೆ ಮೇ 2 ರಂದು ಬಂದ ಫಲಿತಾಂಶ ಜೀಶಾನ್​​ನನ್ನೆ ಕುಗ್ಗಿಸಿ ಬಿಟ್ಟಿತ್ತು. ಇವರಿಗೆ ಎಲ್ಲ ವಿಷಯಗಳಲ್ಲಿ 100ಕ್ಕೆ ನೂರು ಅಂಕ ಬಂದಿತ್ತು. ಆದರೆ, ಸಮಾಜ ವಿಜ್ಞಾನದಲ್ಲಿ ಮಾತ್ರ 34 ಅಂಕ ಬಂದಿತ್ತು.

ತಂದೆಯೂ ಮಗ ಪರೀಕ್ಷೆ ವೇಳೆಯೆಲ್ಲೋ ಯಡವಟ್ಟು ಮಾಡಿಕೊಂಡಿದ್ದಾನೆ ಎಂದುಕೊಂಡಿದ್ದರು. ಬಳಿಕ ಉತ್ತರ ಪತ್ರಿಕೆಯ ನಕಲುಪ್ರತಿಗೆ ಅರ್ಜಿ ಸಲ್ಲಿಸಿದ್ದಾರೆ. 6 ದಿನಗಳ ನಂತರ ಉತ್ತರ ಪತ್ರಿಕೆ ನಕಲು ಬಂದಿದೆ. ಆಗ ಜೀಶಾನ್​​ಗೆ ಸಮಾಜ ವಿಜ್ಞಾನದಲ್ಲೂ ಸಹ 80ಕ್ಕೆ 80 ಅಂಕ ಬಂದಿರುವುದು ಗೊತ್ತಾಗಿದೆ. ಇಲ್ಲಿ ಮೌಲ್ಯಮಾಪಕರು ಅಂಕಪಟ್ಟಿಗೆ ನಮೂದು ಮಾಡುವಾಗ 80 ಅಂಕದ ಬದಲು 34 ಎಂದು ತಪ್ಪಾಗಿ ನಮೂದು ಮಾಡಿರುವುದು ತಿಳಿದು ಬಂದಿದೆ.

ನಮ್ಮ‌ ಫಲಿತಾಂಶ ಬಂದಾಗ ನನಗೆ ಎಲ್ಲ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಬಂದಿತ್ತು. ಆದರೆ, ಸಮಾಜ ವಿಜ್ಞಾನದಲ್ಲಿ ಕೇವಲ 34 ಅಂಕ ಬಂದಿತ್ತು. ಇದರಿಂದ ನನಗೆ ತುಂಬ ಬೇಸರವಾಗಿತ್ತು. ನಾನು ಪರೀಕ್ಷೆ ಮುಗಿಸಿದ ಮೇಲೆ ಕೀ ಆನ್ಸರ್‌​ನಲ್ಲಿ ಎಲ್ಲವೂ ಸರಿ ಇತ್ತು. ಆದರೆ, ಸಮಾಜ ವಿಜ್ಞಾನದಲ್ಲಿ ಕೇವಲ 34 ಅಂಕ ಬಂದಿದ್ದು ನೋಡಿ ತುಂಬ ಬೇಸರವಾಗಿತ್ತು. ಕೊನೆಗೆ ನಾನೇ ಏನೋ ತಪ್ಪು ಮಾಡಿದ್ದೀನಿ ಅಂತ ಅನ್ನಿಸಿತ್ತು. ನಂತರ ಉತ್ತರ ಪತ್ರಿಕೆ ತೆಗೆಯಿಸಿ ನೋಡಿದಾಗ 80ಕ್ಕೆ 80 ಅಂಕ ಬಂದಿತ್ತು. ಆದರೆ, ಉತ್ತರ ಪತ್ರಿಕೆ ಮೌಲ್ಯಮಾಪನ ನಡೆದ ನಂತರ ಮೌಲ್ಯಮಾಪಕರು ಮಾರ್ಕ್ಸ್ ಕಾರ್ಡ್​ಗೆ ಎಂಟ್ರಿ ಮಾಡುವಾಗ ತಪ್ಪಾಗಿತ್ತು ಎಂಬುದು ಗೊತ್ತಾಗಿದೆ ಎಂದು ವಿದ್ಯಾರ್ಥಿ ಜೀಶಾನ್ ಅಹಮದ್ ತಿಳಿಸಿದ್ದಾರೆ.

‘ನನ್ನ ಮಗ ಟೆಸ್ಟ್, ಪ್ರಿಪರೇಟರಿ ಎಲ್ಲದರಲ್ಲೂ ನೂರಕ್ಕೆ ನೂರು ಅಂಕ ಗಳಿಸುತ್ತಿದ್ದ. ಆದರೆ, ಅಂತಿಮ ಪರೀಕ್ಷೆಯಲ್ಲಿ ಸಮಾಜ ವಿಜ್ಞಾನದಲ್ಲಿ ಕೇವಲ 34 ಅಂಕ ಬಂದಿದ್ದು ನೋಡಿ ನನಗೂ ಗಾಬರಿ ಆಗಿತ್ತು. ನಿಶಾನ್ ಪರೀಕ್ಷೆ ಬರೆಯುವಾಗ ಎಲ್ಲೋ ಎಡವಟ್ಟು ಮಾಡಿಕೊಂಡಿರಬಹುದು ಎಂದುಕೊಂಡಿದ್ದೆ. ಆದರೆ ಮಗನ ಮೇಲೆ ನಂಬಿಕೆ ಇತ್ತು. ತಕ್ಷಣ ಮೊಬೈಲ್​ನಲ್ಲಿಯೇ ಉತ್ತರ ಪತ್ರಿಕೆ ನಕಲು ಕಾಪಿಗೆ ಅರ್ಜಿ ಹಾಕಿದೆವು. ನಂತರ 6ನೇ ತಾರೀಖು ಉತ್ತರ‌ ಪತ್ರಿಕೆ ಕಾಪಿ ಬಂದಾಗ 80ಕ್ಕೆ 80 ಬಂದಿದ್ದು ನೋಡಿ ತುಂಬ ಖುಷಿ ಆಯಿತು. ಮೌಲ್ಯಮಾಪಕರು ಉತ್ತರ ಪತ್ರಿಕೆ ಮೌಲ್ಯ ಮಾಪನ ಮಾಡಿದ ಮೇಲೆ ಸರಿಯಾಗಿ ನೋಡಿ ಎಂಟ್ರಿ ಮಾಡಬೇಕು’ ಎಂದು ವಿದ್ಯಾರ್ಥಿ ಜೀಶಾನ್‌ ತಂದೆ ಒತ್ತಾಯಿಸಿದರು.