ಈಡಿಗ ಬಿಲ್ಲವ, ನಾಮಧಾರಿ, ಧೀವರ ಸೇರಿ 26 ಪಂಗಡಗಳನ್ನು ಹೊಂದಿದ ಸಮಾಜದ ವಿವಿಧ ಬೇಡಿಕೆ ಈಡೇರಿಕೆಗಾಗಿ ಜ. 6ರಿಂದ ಕರದಾಳದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದಿಂದ ಬೆಂಗಳೂವರೆಗೆ 41 ದಿನದಲ್ಲಿ 700 ಕಿಮೀ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿ ಡಾ. ಪ್ರಣವಾನಂದ ಸ್ವಾಮೀಜಿಕನ್ನಡಪ್ರಭ ವಾರ್ತೆ ಶಿರಸಿ

ಈಡಿಗ ಬಿಲ್ಲವ, ನಾಮಧಾರಿ, ಧೀವರ ಸೇರಿ 26 ಪಂಗಡಗಳನ್ನು ಹೊಂದಿದ ಸಮಾಜದ ವಿವಿಧ ಬೇಡಿಕೆ ಈಡೇರಿಕೆಗಾಗಿ ಜ. 6ರಿಂದ ಕರದಾಳದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದಿಂದ ಬೆಂಗಳೂವರೆಗೆ 41 ದಿನದಲ್ಲಿ 700 ಕಿಮೀ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿ ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಾದಯಾತ್ರೆಯ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು. ಕುಲಕಸುಬು ಕಳೆದುಕೊಂಡ ಕಲ್ಯಾಣ ಕರ್ನಾಟಕ ಭಾಗದ ಸಂತ್ರಸ್ತ ಈಡಿಗರಿಗೆ 5 ಎಕರೆ ಜಮೀನು ಪ್ರತಿ ಕುಟುಂಬಕ್ಕೆ ಮಂಜೂರು ಮಾಡಬೇಕು. ಸಮಾಜವನ್ನು ಈಗಿರುವ 2ಎ ಯಿಂದ ಎಸ್‌ಟಿ ಮೀಸಲಾತಿಗೆ ಸೇರ್ಪಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌಧದ ಎದುರು ಸ್ಥಾಪಿಸಿ, ಸಮಾಜದ ಹಲವು ವರ್ಷದ ಬೇಡಿಕೆ ಈಡೇರಿಸಬೇಕು ಎಂದರು.

ಈಡಿಗ ಸಮಾಜದ ಹಾಗೂ ಹಿಂದುಳಿದ ವರ್ಗದ ಭಕ್ತಿ ಮತ್ತು-ಶ್ರದ್ಧಾ ಕೇಂದ್ರವಾದ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿರುದ್ಧ ಹೂಡಿದ ಮೊಕ್ಕದ್ದಮೆಗಳನ್ನು ಕೂಡಲೇ ಹಿಂತೆಗೆದುಕೊಂಡು ದೇವಸ್ಥಾನಕ್ಕೆ ಭದ್ರತೆ ಹಾಗೂ ಕ್ಷೇತ್ರಕ್ಕೆ ಅಗತ್ಯ ಭೂಮಿ ಮಂಜೂರುಗೊಳಿಸಬೇಕು. ಕೋಟಿ ಚೆನ್ನಯ್ಯರ ಜನ್ಮಸ್ಥಳ ಮತ್ತು ಐಕ್ಯಸ್ಥಳ ಅಭಿವೃದ್ಧಿಗಾಗಿ ಕೋಟಿ ಚನ್ನಯ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿ ಬಜೆಟ್‌ನಲ್ಲಿ ಕನಿಷ್ಠ ₹100 ಕೋಟಿ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಈಡಿಗ, ಸಾಮಧಾರಿ ಸಮುದಾಯ ಕಡೆಗಣಿಸಿದ್ದು, ಅಧಿಕಾರ ಹಿಡಿಯುವ ಆಸೆಗೆ ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ-ಪಂಗಡಗಳು ನೆನಪಾಗುತ್ತದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯ ಕಾಂಗ್ರೆಸ್‌ನ ಮುಖವಾಣಿ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಹಿಂದಿನ ಅವಧಿ ಹಾಗೂ ಈಗಿನ ಎರಡೂವರೆ ವರ್ಷದ ಅವಧಿಯಲ್ಲಿ ಸಮುದಾಯಕ್ಕೆ ನೀಡಿದ ಕೊಡುಗೆ ಶ್ವೇತಪತ್ರ ಹೊರಡಿಸಬೇಕು. ಅಹಿಂದ ಹಾಗೂ ಹಿಂದುಳಿದವರ ಹೆಸರಿನಲ್ಲಿ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಈ ಸಮಾಜಕ್ಕೆ ಏನೂ ಮಾಡಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು. ಆದ್ದರಿಂದ ಸಚಿವ ಪ್ರಿಯಾಂಕ ಖರ್ಗೆ ಅವರ ಕ್ಷೇತ್ರವಾದ ಚಿತ್ತಾಪುರದ ಕರದಾಳದ ಶಕ್ತಿಪೀಠದಿಂದ ಜ. 6ರಂದು 700 ಕಿಮೀ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಂಡು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ದೇವರಾಜ ನಾಯ್ಕ, ಶೇಖರ ಪೂಜಾರಿ, ಗಣೇಶ ನಾಯ್ಕ, ರವಿ ಪೂಜಾರಿ, ಎನ್.ಜಿ.ನಾಯ್ಕ, ವಿನಾಯಕ, ದಿನೇಶ ನಾಯ್ಕ, ಮಂಜು ನಾಯ್ಕ ತೆಪ್ಪಿಗೆ ಮತ್ತಿತರರು ಇದ್ದರು.ಸಮಾಜದ ಕಡೆಗಣನೆ: ಆರೋಪ

ಸಮಾಜದ ಪ್ರಮುಖ 18 ಬೇಡಿಕೆ ಈಡೇರಿಸುವಂತೆ ಕರದಾಳದಿಂದ ಪ್ರಾರಂಭವಾಗಿ ಪಾದಯಾತ್ರೆಯು ಚಿತ್ತಾಪುರ, ಶಹಬಾದ, ಜೇವರ್ಗಿ, ಶಹಪುರ, ದೇವದುರ್ಗ, ಸಿಂಧನೂರು, ಗಂಗಾವತಿ, ಹೊಸಪೇಟೆ, ಚಿತ್ರದುರ್ಗ ಮೂಲಕ ಬೆಂಗಳೂರು ತಲುಪಲಿದೆ. ಪ್ರತಿ ದಿನ 20 ಕಿ.ಮೀ ಪಾದಯಾತ್ರೆ ಮೂಲಕ 15 ಬಹಿರಂಗ ಸಭೆ ನಡೆಸಲಾಗುತ್ತದೆ. ಅಧಿಕಾರಕ್ಕೆ ಮಾತ್ರ ಈಡಗಿ ಬಿಲ್ಲವ, ನಾಮಧಾರಿ, ಧೀವರ, ಜಾತೀಯ ಸಮಾಜ ನೆನಪಾಗುತ್ತದೆ. 4 ಜಿಲ್ಲೆಯಲ್ಲಿ ಸಮಾಜವನ್ನು ರಾಜಕೀಯ ಮತ್ತು ಸಾಮಾಜಿಕವಾಗಿ ಎರಡೂ ಪಕ್ಷಗಳು ಕಡೆಗಣಿಸಿದೆ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.