ಹುಟ್ಟು ಕುರುಡನಾದ ವೃದ್ಧನಿಗೆ ಧರ್ಮಸ್ಥಳ ವಾತ್ಸಲ್ಯ ಯೋಜನೆಯಿಂದ ಮನೆ

| Published : Feb 06 2024, 01:36 AM IST

ಹುಟ್ಟು ಕುರುಡನಾದ ವೃದ್ಧನಿಗೆ ಧರ್ಮಸ್ಥಳ ವಾತ್ಸಲ್ಯ ಯೋಜನೆಯಿಂದ ಮನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ತಾಲೂಕಿನ ಕಲ್ಲುಶೆಟ್ಟಿಹಳ್ಳಿ ಗ್ರಾಮದಲ್ಲಿ ಸೂರಿಲ್ಲದೆ ಅನಾಥರಾಗಿ ಜೀವನ ಸಾಗಿಸುತ್ತಿದ್ದ ಜನ್ಮತಃ ಕುರುಡರಾಗಿದ್ದ ಅಣ್ಣೇಗೌಡರಿಗೆ ಪುಟ್ಟದೊಂದು ಮನೆ ಕಟ್ಟಿಕೊಟ್ಟು ಅವರ ಜೀವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ವಾತ್ಸಲ್ಯ ಯೋಜನೆ ಬೆಳಕು ಮೂಡಿಸಿದೆ.

ಕಲ್ಲುಶೆಟ್ಟಿಹಳ್ಳಿಯಲ್ಲಿ ಸೂರಿಲ್ಲದೆ ಜೀವನ ಸಾಗಿಸುತ್ತಿದ್ದ ಅಣ್ಣೇಗೌಡರು । ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಸೂರು

ಎ. ರಾಘವೇಂದ್ರ ಹೊಳ್ಳ

ಕನ್ನಡಪ್ರಭ ವಾರ್ತೆ ಬೇಲೂರು

ದುಸ್ಥಿತಿಯಲ್ಲಿ ಜೀವಿಸುತ್ತಿರುವ ಅಸಹಾಯಕ ಬಂಧುಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಜೀವಿತಾವಧಿಯ ಕೊನೆಯ ಕ್ಷಣದಲ್ಲಿ ನೆಮ್ಮದಿಯ ಜೀವನವನ್ನು ಕಲ್ಪಿಸುವುದು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಆಶಯವಾಗಿದ್ದು, ತಾಲೂಕಿನ ಕಲ್ಲುಶೆಟ್ಟಿಹಳ್ಳಿ ಗ್ರಾಮದಲ್ಲಿ ಸೂರಿಲ್ಲದೆ ಅನಾಥರಾಗಿ ಜೀವನ ಸಾಗಿಸುತ್ತಿದ್ದ ಜನ್ಮತಃ ಕುರುಡರಾಗಿದ್ದ ಅಣ್ಣೇಗೌಡರಿಗೆ ಪುಟ್ಟದೊಂದು ಮನೆ ಕಟ್ಟಿಕೊಟ್ಟು ಅವರ ಜೀವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ವಾತ್ಸಲ್ಯ ಯೋಜನೆ ಬೆಳಕು ಮೂಡಿಸಿದೆ.

ಜನ್ಮತಃ ಕುರುಡರು:

ಬೇಲೂರು ತಾಲೂಕಿನ ಕಲ್ಲುಶೆಟ್ಟಿಹಳ್ಳಿ ಗ್ರಾಮದ, ಬಾಗಿದ ದೇಹ ನೆರೆಕಟ್ಟಿದ ಮುಖ, ಬಿಳಿ ಕೂದಲಿನ, ಅಂದಾಜು 75 ರಿಂದ 80 ವರ್ಷ ಪ್ರಾಯದ ಅಣ್ಣೇಗೌಡರು ಜನ್ಮತಃ ಕುರುಡರು, ಪ್ರಾಯದಲ್ಲಿ ಅಲ್ಲಿ-ಇಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು, ಮೂರು ಹೊತ್ತಿನ ಊಟಕ್ಕೆ ಕಡಿಮೆಯಾಗದಂತೆ ಸ್ವಾವಲಂಬಿ ಜೀವನ ನಡೆಸಿದ್ದರು. ಆದರೆ ವರ್ಷಗಳು ಕಳೆದಂತೆ ವಯೋಸಹಜ ನಿಶ್ಯಕ್ತಿ, ಆರೋಗ್ಯ ಸಮಸ್ಯೆಗಳಿಂದ ಕೂಲಿ ಮಾಡಿ ಜೀವನ ನಡೆಸುವುದು ಕಷ್ಟವಾಯಿತು, ಇರಲು ಗೂಡು ಇಲ್ಲದೆ ದುಡಿಯಲು ಶಕ್ತಿ ಇಲ್ಲದೆ, ಯಾವುದೇ ಸಂಬಂಧಿಕರ ಆಸರೆ ಇಲ್ಲದೆ ಗೌಡರು ರಸ್ತೆ ಬದಿ ಕುರುಚಲು ಗಿಡವನ್ನೇ ಆಶ್ರಯಿಸುವಂತಾಗಿತ್ತು, ಇವರಿಗೆ ಸರಕಾರದಿಂದ ಯಾವುದೇ ಮಾಸಾಶನ ದೊರೆಕಿರಲಿಲ್ಲ.

ಜ್ಞಾನವಿಕಾಸ ಮೇಲ್ವಿಚಾರಕರ ಗಮನಕ್ಕೆ:

ಹುಟ್ಟಿನಿಂದಲೇ ಅಂಧರಾಗಿ ಯಾವುದೇ ಸಂಬಂಧಿಕರ ಸಹಾಯವಿಲ್ಲದೆ, ಆಸರೆ ಇಲ್ಲದೆ, ವಾಸ ಮಾಡಲು ಪುಟ್ಟ ಗೂಡು ಸಹ ಇಲ್ಲದೆ ಪ್ರಪಂಚ ಕಾಣದ ಅಣ್ಣೆಗೌಡರು ಸ್ಥಿತಿ ಕಣ್ಣಲ್ಲಿ ನೀರು ಜಿನಗುವಂತೆ ಮಾಡಿತ್ತು.

ಬೇಲೂರು ತಾಲೂಕಿನ ಜ್ಞಾನನವಿಕಾಸ ಸಮನ್ವಯಾಧಿಕಾರಿ ಮತ್ತು ವಲಯದ ಮೇಲ್ವಿಚಾರಕರು ಕಲ್ಲುಶೆಟ್ಟಿಹಳ್ಳಿ ಗ್ರಾಮದಲ್ಲಿ ಕ್ಷೇತ್ರ ಸಂದರ್ಶನ ಮಾಡುವ ಸಂದರ್ಭ ಬೀದಿ ಬದಿಯಲ್ಲಿ ಮಲಗಿರುವ ಅಣ್ಣೇಗೌಡರನ್ನು ಕಂಡು ವಿಚಾರಿಸಿದರು. ಅಣ್ಣೇಗೌಡರು ಹುಟ್ಟಿನಿಂದಲೇ ಕುರುಡರಾಗಿದ್ದು ಇರಲು ಮನೆಯು ಇಲ್ಲದೆ 15 ವರ್ಷಗಳಿಂದ ಬೀದಿ ಬದಿಯಲ್ಲಿ ಮಲಗಿಕೊಂಡು ಜೀವನ ನಡೆಸುವಂತಹ ಕಷ್ಟಕರ ಪರಿಸ್ಥಿತಿಯಲ್ಲಿರುವುದನ್ನು ಗಮನಿಸಿದರು. ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರಿಂದ ಜಾರಿಗೆ ಬಂದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣ ಮಾಡಬೇಕು ಎಂದು ತೀರ್ಮಾಸಿದರು.

ವಾತ್ಸಲ್ಯ ಮನೆ ಸಿದ್ಧ:

ಈ ಮದ್ಯೆ ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡೆಯಿಂದ ಮಾಸಾಶನ ನೀಡಲು ಶುರು ಮಾಡಿದ ನಂತರ ಇವರ ನಿತ್ಯ ಜೀವನದ ಖರ್ಚು ವೆಚ್ಚಕ್ಕೆ ಸಹಕಾರಿಯಾಯಿತು. ವಾತ್ಸಲ್ಯ ಮನೆ ನಿರ್ಮಾಣ ಬಗ್ಗೆ ಗ್ರಾಮದ ಪ್ರಮುಖರು ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡಿದರು. ಬೆರಳೆಣಿಕೆ ದಿನಗಳಲ್ಲಿ ಗೌಡರಿಗೆ ಮನೆ ಸಿದ್ದವಾಯಿತು. ಈ ಮಧ್ಯೆ ಅಣ್ಣೇಗೌಡರು ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಸಂಸ್ಥೆ ಕಡೆಯಿಂದ ಚಿಕಿತ್ಸೆಯನ್ನು ಕೊಡಿಸಿ ಪೂರ್ಣ ವೆಚ್ಚವನ್ನು ಸಂಸ್ಥೆಯಿಂದಲೇ ಭರಿಸಲಾಯಿತು. ಮಳೆಗಾಲದ ರಸ್ತೆ ಬದಿಯಲ್ಲಿನ ಹಾಗೂ ದೇವಸ್ಥಾನ ವಾಸಕ್ಕೂ ಮುಕ್ತಿ ದೊರೆತಂತಾಗಿದೆ.

ತಹಸೀಲ್ದಾರ್ ಶ್ಲಾಘನೆ :

ವಾತ್ಸಲ್ಯ ಮನೆ ಹಸ್ತಾಂತರ ಸಂದರ್ಭ ತಾಲೂಕು ದಂಡಾಧಿಕಾರಿ ಮಮತ ಎಂ. ಮಾತನಾಡಿ ಸರ್ಕಾರ ಮಾಡಬೇಕಾದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡಿ ತೋರಿಸಿರುವುದು ಶ್ಲಾಘನೀಯ. ಇಂದಿನಿಂದ ಇವರ ಜೀವನ ನಿರ್ವಹಣೆಗಾಗಿ ಸರ್ಕಾರದಿಂದ ವೃದ್ಧಾಪ್ಯ ವೇತನವನ್ನು ಮಂಜೂರು ಮಾಡುವಂತೆ ಇಲಾಖೆ ಸಿಬ್ಬಂದಿಗೆ ಆದೇಶ ಮಾಡಿದರು. ಮಾತೃಶ್ರೀಯವರ ಆಶಯದಂತೆ ಇಂತಹ ಕಾರ್ಯಕ್ರಮಗಳಿಗೆ ದೇಶದ ಸಹೃದಯಿಗಳು ತಮ್ಮನ್ನ ತಾವು ತೊಡಗಿಸಿಕೊಂಡಲ್ಲಿ ಶೋಚನೀಯ ಸ್ಥಿತಿಯಲ್ಲಿ ಬದುಕುವ ವ್ಯಕ್ತಿಗಳಿಗೆ ಆಸರೆಯಾಗಬಹುದು ಎಂಬ ಆಶಯ ವ್ಯಕ್ತಪಡಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ವಾತ್ಸಲ್ಯ ಯೋಜನೆಯಿಂದ ನಿರ್ಮಾಣವಾದ ಮನೆ.