ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಗಂಟಲು ಬೇನೆಯಿಂದ ಚಿಕಿತ್ಸೆಗಾಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗೃಹಿಣಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಕುಟುಂಬದವರು ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು.ತಾಲೂಕಿನ ಸಿ.ಎ.ಕೆರೆ ಹೋಬಳಿಯ ಅಣ್ಣೂರು ಗ್ರಾಮದ ಮಹೇಶ್ ಎಂಬುವವರ ಪತ್ನಿ ಸಿಂಧು ಅಲಿಯಾಸ್ ಸಿದ್ದಮ್ಮ(40) ಮೃತಪಟ್ಟವರು.
ಈಕೆ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಪೋಷಕರು, ರೈತ ಸಂ ಘ, ಜನಪರ ಸಂಘಟನೆಗಳೊಂದಿಗೆ ಮೃತರ ಶವವನ್ನು ವಶಕ್ಕೆ ಪಡೆಯಲು ನಿರಾಕರಿಸಿ ಪ್ರತಿಭಟನೆಗಳಿದ ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.ಗೃಹಿಣಿ ಸಿಂಧು ಗಂಟಲು ಬೇನೆ ನರಳುತ್ತಿದ್ದ ಕಾರಣ ಭಾರತೀನಗರ ಸಮೀಪದ ಗುರುದೇವರಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಿದ್ದರು. ನಂತರ ವೈದ್ಯರು ಪಟ್ಟಣ ಬಸ್ ಡಿಪೋ ಎದುರಿನ ಮದ್ದೂರು ಮೆಡಿಕಲ್ ಸೆಂಟರ್ (ಸಿದ್ದೇಗೌಡ ಆಸ್ಪತ್ರೆ)ನಲ್ಲಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಂಧು ಬೆಳಗ್ಗೆ 10.30ಕ್ಕೆ ಸಿದ್ದೇಗೌಡ ಆಸ್ಪತ್ರೆಗೆ ಪರೀಕ್ಷೆಗೊಳಪಡಿಸಿದ್ದಾರೆ. ಆಸ್ಪತ್ರೆ ಮುಖ್ಯಸ್ಥ ಸಿದ್ದೇಗೌಡರ ಸೂಚನೆ ಮೇರೆಗೆ ಸಹಾಯಕರಾದ ಮಧು ಅವರು ಗಂಟಲು ಬೇನೆಗೆ ಔಷಧಿ ಕೊಟ್ಟಿದ್ದಾರೆ. ಔಷಧಿ ಕೊಟ್ಟ ಸ್ವಲ್ಪ ಹೊತ್ತಿನಲ್ಲಿ ಸಿಂಧುಗೆ ವ್ಯತಿರಿಕ್ತ ಪರಿಣಾಮ ಬೀರಿದ ಕಾರಣ ಸಿಂಧು ಹತ್ತಾರು ಬಾರಿ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾರೆ.ಈಕೆಯನ್ನು ಮಂಡ್ಯ ಆಸ್ಪತ್ರೆಗೆ ಕರೆದೊಯ್ಯಲು ಅವಕಾಶ ನೀಡದೆ ಆಸ್ಪತ್ರೆಯಲ್ಲೆ ಇಟ್ಟುಕೊಂಡು ಚಿಕಿತ್ಸೆ ನೀಡುತ್ತಿದ್ದ ಕಾರಣ ಮೃತಪಟ್ಟಿದ್ದಾಳೆ. ಇದಕ್ಕೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಪೋಷಕರು ಸಿಂಧು ಶವವನ್ನು ವಶಕ್ಕೆ ಪಡೆಯದೆ ನಿರಾಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಆಸ್ಪತ್ರೆ ಬಳಿ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು.
ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ಕೃಷ್ಣಪ್ಪ, ತಹಸೀಲ್ದಾರ್ ಸೋಮಶೇಖರ್, ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ, ಕೆ.ಎಂ.ದೊಡ್ಡಿ ವೃತ್ತ ನಿರೀಕ್ಷಕ ಆನಂದ್ , ಪಿಎಸ್ಐ ಮಂಜುನಾಥ್, ಪೊಲೀಸರು ಸ್ಥಳದಲ್ಲೇ ಮೊಕ್ಕಂ ಹೂಡಿದ್ದಾರೆ.ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿಂಧು ಸಾವಿನ ಬಗ್ಗೆ ಆಸ್ಪತ್ರೆ ಮುಖ್ಯಸ್ಥ ಡಾ.ಸಿದ್ದೇಗೌಡ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ರೈತ ಸಂಘದ ಮುಖಂಡರು ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿದ್ದು, ಮಾತುಕತೆ ಮುಂದುವರೆದಿದೆ.
ಪೋಷಕರ ದೂರಿನ ಮೇರೆಗೆ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.