ಸಾರಾಂಶ
ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರಲಾರಂಭಿಸಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರಲಾರಂಭಿಸಿದೆ.ಭಾನುವಾರ ಕೃಷ್ಣೆ ಒಡಲು ಮೈದುಂಬಿಕೊಂಡು ಹರಿಯುತ್ತಿದೆ. ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೊಯ್ನಾ ಹಾಗೂ ದೂಧಗಂಗಾ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ಹರಿಬಿಟ್ಟಿದ್ದರಿಂದ ನೀರಿನ ಪ್ರಮಾಣ ಏರಿಕೆಯಾಗಿದೆ.
ಮತ್ತಷ್ಟು ನೀರು : ಪ್ರತಿ ದಿನ ೫ ರಿಂದ ೧೦ ಕ್ಯುಸೆಕ್‌ನಷ್ಟು ನೀರು ರಾಜ್ಯಕ್ಕೆ ಬರುತ್ತಿದೆ. ನೀರಿನ ಹರಿವಿನ ಪ್ರಮಾಣ ಇನ್ನೆರಡು ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.ಅಬ್ಬರದ ಮಳೆ : ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಭಾರಿ ಪ್ರಮಾಣದ ಮಳೆಯಾಗುತ್ತಿರುವ ಹಿನ್ನಲೆ ಬರದ ಛಾಯೆಯಲ್ಲಿ ಮುಳುಗಿದ್ದ ವಿಜಯಪುರ-ಬೆಳಗಾವಿ-ಬಾಗಲಕೋಟೆ ಜಿಲ್ಲೆಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬತ್ತಿ ಹೋಗಿದ್ದ ಕೃಷ್ಣೆಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಒಂದು ವಾರದಲ್ಲಿ ಜಲಾಶಯಗಳ ಚಿತ್ರಣವೇ ಬದಲಾಗಿ ಹೋಗಿದೆ.
ಮಹಿಷವಾಡಗಿ ಸೇತುವೆ ಶೀಘ್ರ ಭರ್ತಿ: ಇದೇ ರೀತಿ ನೀರಿನ ಪ್ರಮಾಣ ಹರಿದು ಬಂದಲ್ಲಿ ಇನ್ನೆರಡು ದಿನಗಳಲ್ಲಿ ಮಹಿಷವಾಡಗಿ ಸೇತುವೆ ಮುಳುಗುವ ಸಾಧ್ಯತೆಯಿದ್ದು, ಬೋಟ್ ವ್ಯವಸ್ಥೆ ಕಲ್ಪಿಸುವುದು ಅನಿವಾರ್ಯವಾಗಲಿದೆ.