ಕೃಷ್ಣಾ ತೀರದಲ್ಲಿ ಬಲೆಗೆ ಬಿದ್ದ ಬೃಹತ್ ಮೊಸಳೆ

| Published : Aug 29 2024, 12:51 AM IST

ಕೃಷ್ಣಾ ತೀರದಲ್ಲಿ ಬಲೆಗೆ ಬಿದ್ದ ಬೃಹತ್ ಮೊಸಳೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಹಲವಾರು ದಿನಗಳಿಂದ ನದಿ ತೀರದ ಜನರ ನಿದ್ದೆಗೆಡಿಸಿದ್ದ ಸುಮಾರು 15 ಅಡಿ ಉದ್ದ ಹಾಗೂ 2 ಕ್ವಿಂಟಲ್ ತೂಕದ ಬೃಹತ್‌ ಆಕಾರದ ಮೊಸಳೆಯೊಂದು ಕಾಗವಾಡ ತಾಲೂಕಿನ ಕೃಷ್ಣಾ-ಕಿತ್ತೂರು ಗ್ರಾಮದ ಹೊರವಲಯದಲ್ಲಿ ಕೃಷ್ಣಾ ನದಿ ತೀರದಲ್ಲಿ ಬುಧವಾರ ಬೆಳಗ್ಗೆ ಸೆರೆ ಸಿಕ್ಕಿದೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಕಳೆದ ಹಲವಾರು ದಿನಗಳಿಂದ ನದಿ ತೀರದ ಜನರ ನಿದ್ದೆಗೆಡಿಸಿದ್ದ ಸುಮಾರು 15 ಅಡಿ ಉದ್ದ ಹಾಗೂ 2 ಕ್ವಿಂಟಲ್ ತೂಕದ ಬೃಹತ್‌ ಆಕಾರದ ಮೊಸಳೆಯೊಂದು ಕಾಗವಾಡ ತಾಲೂಕಿನ ಕೃಷ್ಣಾ-ಕಿತ್ತೂರು ಗ್ರಾಮದ ಹೊರವಲಯದಲ್ಲಿ ಕೃಷ್ಣಾ ನದಿ ತೀರದಲ್ಲಿ ಬುಧವಾರ ಬೆಳಗ್ಗೆ ಸೆರೆ ಸಿಕ್ಕಿದೆ.

ಕೃಷ್ಣಾ ನದಿಗೆ ಪ್ರವಾಹ ಬಂದಿದ್ದರಿಂದ ಹಲವು ದಿನಗಳಿಂದ ಮೊಸಳೆ ಕಾಣಿಸಿಕೊಂಡು ಈ ಭಾಗದ ಜನರಲ್ಲಿ ಭೀತಿ ಹುಟ್ಟಿಸಿತ್ತು. ಈ ಕುರಿತು ನದಿತೀರದ ಜನರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ಬೆಳ್ಳಂಬೆಳಗ್ಗೆ ಆಹಾರ ಅರಿಸಿ ನದಿಯಿಂದ ಹೊರಕ್ಕೆ ಬಂದಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ರೈತರ ಸಹಕಾರದಿಂದ ಬಲೆ ಹಾಕಿ ಮೊಸಳೆ ಹಿಡಿದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ರೈತರು ಹಗ್ಗದ ಬಲೆ ಮಾಡಿ ಮೊಸಳೆಗೆ ಹಾಕಿ ಎಳೆಯಲು ಪ್ರಯತ್ನಿಸಿದಾಗ ಬಲೆ ಸಹಿತ ಸುಮಾರು 500 ಅಡಿ ದೂರದವರೆಗೆ ಎಳೆದುಕೊಂಡು ಹೋಗುತ್ತಿತ್ತು. ಆದರೂ ಬಿಡದ ಸಿಬ್ಬಂದಿ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಕೃಷ್ಣಾ ನದಿಯಲ್ಲಿ ಮೊಸಳೆಯೊಂದು ಸೆರೆ ಸಿಕ್ಕಿರುವ ಸುದ್ದಿ ಕಾಲ್ಗಿಚ್ಚಿನಂತೆ ಹರಡುತ್ತಿದ್ದಂತೆ ಸುತ್ತಲಿನ ಗ್ರಾಮಗಳ ಜನರು ತಂಡೋಪತಂಡವಾಗಿ ಆಗಮಿಸಿ ಸೆರೆ ಸಿಕ್ಕ ಮೊಸಳೆಯ ಮೇಲೆ ಕುಳಿತು ಪೋಜು ಮಾಡುತ್ತ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಗಮನ ಸೆಳೆಯಿತು.

ಮೊಸಳೆ ಯಾವಾಗ ಕಾಣಿಸುತ್ತದೆಯೋ ಆಗ ನಮಗೆ ಮಾಹಿತಿ ನೀಡಿ ಜನರಿಗೆ ತಿಳಿಸಿದ್ದೆವು. ಬುಧವಾರ ಬೆಳಗ್ಗೆ ಆಹಾರಕ್ಕಾಗಿ ಮೊಸಳೆ ನದಿಯಿಂದ ಹೊರ ಬಂದಾಗ ಸಾರ್ವಜನಿಕರು ಮಾಹಿತಿ ನೀಡಿದ್ದರಿಂದ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಸುಮಾರು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಸೆರೆ ಹಿಡಿಯಲಾಯಿತು ಎಂದು ವಲಯ ಅರಣ್ಯಾಧಿಕಾರಿ ರಾಖೇಶ ಅರ್ಜುನವಾಡ ತಿಳಿಸಿದರು.

ನಿಟ್ಟುಸಿರು ಬಿಟ್ಟ ಜನತೆ: ಈ ಮೊಸಳೆ ಕಳೆದ ಹಲವು ದಿನಗಳಿಂದ ಆಗಾಗ ಕಾಣಿಸಿಕೊಂಡು ನದಿತೀರದ ಜನತೆಯಲ್ಲಿ ಭಯ ಹುಟ್ಟಿಸಿತ್ತು. ಆಗಾಗ್ಗೆ ನದಿಯಿಂದ ಹೊರ ಬಂದು ರೈತರ ಎಮ್ಮೆ, ಆಕಳು, ಕರು ಹಾಗೂ ಮೇಕೆಗಳನ್ನು ಬಲಿಪಡೆಯುತ್ತಿತ್ತು. ರಾತ್ರಿಯಾದರೆ ನದಿ ತೀರದ ಜನರು ಮೊಸಳೆಗೆ ಹೆದರಿ ಹೊರಗೆ ಬರುಲು ಹೆದರುತ್ತಿರಲಿಲ್ಲ. ಕಬ್ಬಿನ ಗದ್ದೆಯಲ್ಲಿ ಸರ್.... ಎಂದು ಸಪ್ಪಳಾದರೆ ಸಾಕು ಜನರು ಮೊಸಳೆ ಭೀತಿಯಿಂದ ಮನೆಗೆ ಓಡಿ ಬರುತ್ತಿದ್ದರು. ಮೊಸಳೆ ಸೆರೆಸಿಕ್ಕ ಸುದ್ದಿ ತಿಳಿದ ನದಿತೀರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.