ಚಾಮುಂಡಿ ಕರಗಕ್ಕೆ ಸಾಕ್ಷಿಯಾದ ಜನಸಾಗರ

| Published : Jul 15 2025, 11:45 PM IST

ಸಾರಾಂಶ

ರಾಮನಗರ: ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಕರಗ ಮಹೋತ್ಸವಕ್ಕೆ ರಾಜಕೀಯ ಪಕ್ಷಗಳ ನಾಯಕರ ಆದಿಯಾಗಿ ಸಹಸ್ರಾರು ಜನರು ಸಾಕ್ಷಿಯಾದರು.

ರಾಮನಗರ: ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಕರಗ ಮಹೋತ್ಸವಕ್ಕೆ ರಾಜಕೀಯ ಪಕ್ಷಗಳ ನಾಯಕರ ಆದಿಯಾಗಿ ಸಹಸ್ರಾರು ಜನರು ಸಾಕ್ಷಿಯಾದರು.

ಕರಗ ಮಹೋತ್ಸವ ಅಂಗವಾಗಿ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಪಾಲ್ಗೊಂಡು ನಾಡಿಗೆ ಒಳಿತಾಗುವಂತೆ ದೇವರಲ್ಲಿ ಬೇಡಿಕೊಂಡರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್ ಸೇರಿ ಕಾಂಗ್ರೆಸ್ ನಾಯಕರು ರಾತ್ರಿ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಸ ಮಂಜರಿ ಕಾರ್ಯಕ್ರಮ ವೀಕ್ಷಿಸಿದರು. ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ್ ನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಹರಿದು ಬಂದ ಜನಸಾಗರ:

ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಕೈಗೊಳ್ಳಲಾಯಿತು. ದೇವಿಯ ದರ್ಶನಕ್ಕೆ ರಾಮನಗರವೇ ಅಲ್ಲದೆ, ಪಕ್ಕದ ಚನ್ನಪಟ್ಟಣ, ಮಾಗಡಿ, ಕನಕಪುರ, ಬಿಡದಿ ಸೇರಿದಂತೆ ಮಂಡ್ಯ, ಬೆಂಗಳೂರಿನಿಂದಲೂ ಭಕ್ತರು ಆಗಮಿಸಿದ್ದರು.

ಮಂಗಳವಾರ ಮುಂಜಾನೆಯಿಂದ ಸಂಜೆವರೆಗೆ ಸಾವಿರಾರು ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ತಮಟೆ ವಾದ್ಯಗಳ ಸಮೇತ ಸುತ್ತಮುತ್ತಲಿನ ಗ್ರಾಮ ಹಾಗೂ ನಾನಾ ಪ್ರದೇಶಗಳಿಂದ ತಂಬಿಟ್ಟು ಆರತಿಗಳನ್ನು ಹೊತ್ತು ತಂದ ಮಹಿಳೆಯರು ಶ್ರದ್ಧಾಭಕ್ತಿಯಿಂದ ಚಾಮುಂಡೇಶ್ವರಿಗೆ ಆರತಿ, ಪೂಜೆ ಸಲ್ಲಿಸಿದರು.

ಅಲ್ಲದೆ ನಗರದ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಚಾಮುಂಡೇಶ್ವರಿ ಸೇರಿದಂತೆ ನಗರದಲ್ಲಿ 8 ಕರಗ ಮಹೋತ್ಸವ ನಡೆದಿದ್ದು, ಹಬ್ಬವನ್ನು ವೀಕ್ಷಿಸಲು ವಿವಿಧ ಜಿಲ್ಲೆಗಳಲ್ಲಿಂದ ಜನಸಾಗರವೇ ನಗರದತ್ತ ಹರಿದು ಬಂದಿತ್ತು.

ಗಮನ ಸೆಳೆದ ದೀಪಾಲಂಕಾರ:

ಕರಗ ಮಹೋತ್ಸವದ ಅಂಗವಾಗಿ ನಗರದ ಪ್ರತಿ ಬೀದಿಯಲ್ಲೂ ವಿಶೇಷ ದೀಪಾಲಂಕಾರ ಸಾರ್ವಜನಿಕರ ಗಮನ ಸೆಳೆದವು. ಎಲ್ಲ ಪ್ರಮುಖ ರಸ್ತೆಗಳಲ್ಲಿ, ಬಡಾವಣೆಗಳಲ್ಲಿ ಮತ್ತು ಪ್ರಮುಖ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಹಳೆಯ ಬೆಂಗಳೂರು- ಮೈಸೂರು ಹೆದ್ದಾರಿ, ರೈಲ್ವೆ ನಿಲ್ದಾಣ ರಸ್ತೆ, ಎಂ.ಜಿ ರಸ್ತೆ ಸೇರಿದಂತೆ ಎಲ್ಲ ರಸ್ತೆ , ಬೀದಿಗಳು ವಿದ್ಯುತ್ ಅಲಂಕಾರದಿಂದ ಜಗಮಗಿಸುತ್ತಿತ್ತು.

ನಗರದ ಪ್ರಮುಖ ವೃತ್ತಗಳಲ್ಲಿ ವೆಂಕಟೇಶ್ವರ ಸ್ವಾಮಿ, ಹನುಮಂತ, ಚಾಮುಂಡೇಶ್ವರಿ, ಗಣಪತಿ, ಶಿವ ಸೇರಿದಂತೆ ವಿವಿಧ ದೇವತೆಗಳ ಆಕೃತಿಗಳಲ್ಲಿ ವಿದ್ಯುತ್ ದೀಪಾಲಂಕಾರಗಳು ವಿಶೇಷವಾಗಿ ಕಂಗೊಳಿಸುತ್ತಿದ್ದವು.

ಅಗ್ನಿಕೊಂಡದ ಅಂಗವಾಗಿ ನಗರ ಹಾಗೂ ಸುತ್ತಮುತ್ತಲ ಹಳ್ಳಿಗಳ ಭಕ್ತರು ಟ್ರ್ಯಾಕ್ಟರ್, ಎತ್ತಿನ ಗಾಡಿ ಹಾಗೂ ಇತರೆ ವಾಹನಗಳಲ್ಲಿ ಅಗ್ನಿಕೊಂಡಕ್ಕೆ ಕಟ್ಟಿಗೆಗಳ ರಾಶಿಯನ್ನು ಹಾಕುವ ಮೂಲಕ ಹರಕೆ ತೀರಿಸಿಕೊಂಡರು. ಸಂಜೆ 5 ಗಂಟೆಗೆ ಉರುವಲನ್ನು ಅಗ್ನಿಕೊಂಡದಲ್ಲಿ ಜೋಡಿಸಿ ಅಗ್ನಿ ಸ್ಪರ್ಶ ಮಾಡಲಾಯಿತು. ಬುಧವಾರ ಬೆಳಿಗ್ಗೆ 7 ಗಂಟೆಗೆ ಕರಗ ಅಗ್ನಿಕೊಂಡ ಪ್ರವೇಶಿಸಲಿದೆ.

ನಗರದ ಹೊರ ವಲಯದಲ್ಲಿರುವ ಸಿಂಗ್ರಾಬೋವಿ ದೊಡ್ಡಿಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಿಂದ ಹೊರಡುವ ಕರಗ, ದ್ಯಾವರಸೇಗೌಡನದೊಡ್ಡಿ, ಚಾಮುಂಡಿಪುರ, ಅಂಚೇಕೆಂಪೇಗೌಡನದೊಡ್ಡಿ, ಪೊಲೀಸ್ ಕ್ವಾಟ್ರಸ್, ಶೆಟ್ಟಿಹಳ್ಳಿ, ಕುಂಬಾರ ಬೀದಿ, ಬಲಿಜಿಗರ ಬೀದಿ, ಗಾಂಧಿನಗರ, ಕಾಯಿಸೊಷ್ಪಿನ ಬೀದಿ ಮೂಲಕ ಸಂಚರಿಸಲಿದೆ.

ಬಾಕ್ಸ್ ....

ಮನ ರಂಜಿಸಿದ ಸಂಗೀತ ರಸ ಸಂಜೆ

ರಾಮನಗರ: ಚಾಮುಂಡೇಶ್ವರಿ ದೇವಿ ಕರಗ ಮಹೋತ್ಸವ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನರ ಮನ ರಂಜಿಸಿತು.

ಆಗಾಗೆ ಜಿನುಗುತ್ತಿದ್ದ ತುಂತುರು ಮಳೆಯ ನಡುವೆಯೂ ಕ್ರೀಡಾಂಗಣದ ಬೃಹತ್ ವೇದಿಕೆಯಲ್ಲಿ ವಾದ್ಯಗೋಷ್ಠಿ, ಗಾಯನ, ನೃತ್ಯ ಕಾರ್ಯಕ್ರಮಗಳು ತಡ ರಾತ್ರಿವರೆಗೂ ಜರುಗಿದವು.

ಸಂಗೀತ ನಿರ್ದೇಶಕ ರಘು ದಿಕ್ಷೀತ್ , ರಾಜೇಶ್ ಕೃಷ್ಣನ್ ಮತ್ತು ತಂಡದವರು ಸಂಗೀತ ರಸಸಂಜೆ ಜತೆಗೆ ಹೆಸರಾಂತ ಗಾಯಕ-ಗಾಯಕಿಯರು ಗಾನ ಸುಧೆ ಹರಿಸಿದರು. ಬಾಣ ಬಿರುಸುಗಳ ಪ್ರದರ್ಶನವೂ ನಡೆಯಿತು. ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಆಟಿಕೆಗಳ ಅಳವಡಿಸಲಾಗಿತ್ತು. ಜಾಯಿಂಟ್ ವ್ಹೀಲ್ , ಬಿಗ್ ವ್ಹೀಲ್, ಟ್ರಾಲಿ ಚೇರ್ ಸೇರಿದಂತೆ ನಾನಾ ಬಗೆಯ ಆಟಗಳನ್ನು ಆಡಿ ಜನರು ಖುಷಿ ಪಟ್ಟರು. ಜತೆಗೆ ತಿಂಡಿ ತಿನಿಸು ಸವಿದು ಬಾಯಿ ಚಪ್ಪಿಸಿದರು.

ಬಾಕ್ಸ್‌.........

ವಿಜೃಂಭಣೆಯ ಕರಗ ಮಹೋತ್ಸವ

ರಾಮನಗರ: ನಗರದ ಶಕ್ತಿ ದೇವತೆ ಶ್ರೀಚಾಮುಂಡೇಶ್ವರಿ ದೇವಿ ಹಾಗೂ ಇತರೆ ದೇವತೆಗಳ ಕರಗ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಜಿಲ್ಲಾ ಕೇಂದ್ರದಲ್ಲಿ ಶಕ್ತಿ ದೇವತೆಗಳ ಘೋಷಣೆ ಎಲ್ಲೆಡೆ ಕೇಳಿ ಬಂದಿತು.

ಪ್ರತಿ ವರ್ಷ ಆಷಾಢಮಾಸದಲ್ಲಿ ರಾಮನಗರದಲ್ಲಿ ವಿಜೃಂಭಣೆಯಿಂದ ಕರಗ ಮಹೋತ್ಸವ ಆಚರಿಸಲಾಗುತ್ತದೆ. ಶ್ರೀ ಚಾಮುಂಡೇಶ್ವರಿ ಸೇರಿದಂತೆ ಇತರೆ ದೇವತೆಗಳ ದೇವಾಲಯದಲ್ಲಿ ಮಂಗಳವಾರ ಬೆಳಗಿನ ಬ್ರಾಹ್ಮಿ ಮೂಹೂರ್ತದಲ್ಲಿಯೇ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಬಾಕ್ಸ್‌............

ಮಡಿ ನೀರು ಕರಗ:

ಚಾಮುಂಡೇಶ್ವರಿ, ಕೊಂಕಾಣಿದೊಡ್ಡಿ, ಚಾಮುಂಡಿಪುರ, ಗಾಂಧೀನಗರ ಆದಿಶಕ್ತಿ, ಬಿಸಿಲು ಮಾರಮ್ಮ, ಮುತ್ತುಮಾರಮ್ಮ ಮಗ್ಗದ ಕೆರೆ ಮಾರಮ್ಮ, ಭಂಡಾರಮ್ಮ ದೇವಿಯ ಅವರ ಮಡಿ ನೀರು ಕರಗ ಜರುಗಿತು. ಇನ್ನು ಚಾಮುಂಡೇಶ್ವರಿ ದೇವಾಲಯದ ಸೇರಿದಂತೆ ಇತರೆ ಕಡೆ, ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದುಕೊಂಡರು.

ಬಾಕ್ಸ್‌............

ಕರಗ ನೃತ್ಯ:

ತಾಳ ಹಾಗೂ ಲಯ ಬದ್ಧವಾಗಿ ತಮಟೆ, ನಗಾರಿ ಶಬ್ಧಕ್ಕೆ ಕರಗಧಾರಕರು ನೃತ್ಯ ಮಾಡುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. ಕೆಲವು ಕರಗಗಳು ಗಂಟೆಯ ಶಬ್ಧಕ್ಕೆ ನೃತ್ಯ ಮಾಡಿದರೂ, ಮತ್ತೆ ಕೆಲವು ಕಡೆ, ದೇವಿಯ ಆರಾಧನಾ ಕೀರ್ತನೆಗಳು ಹಾಗೂ ಪ್ರಾರ್ಥನೆಗಳನ್ನು ಹೇಳುವ ಮೂಲಕ ನೃತ್ಯ ಮಾಡಲು ಉರಿದುಂಬಿಸಿದರು.ಬಾಕ್ಸ್‌........

ಪ್ರಸಾದ ವಿನಿಯೋಗ :

ಇನ್ನು ಭಕ್ತರು ಅಲ್ಲಲ್ಲಿ ಪೆಂಡಾಲ್‌ಗಳನ್ನು ನಿರ್ಮಾಣ ಮಾಡಿ, ದೇವಾಲಯಕ್ಕೆ ಆಗಮಿಸಿದ್ದ ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಿದರು. ಇಲ್ಲಿಯೂ ಸರಥಿ ಸಾಲಿನಲ್ಲಿ ನಿಂತು ಜನತೆ ಪ್ರಸಾದ ಪಡೆದುಕೊಂಡರು. ದೇವಾಲಯದ ಆವರಣದಲ್ಲಿಯೂ ಪ್ರಸಾದ ವಿನಿಯೋಗ ಮಾಡಲಾಯಿತು. ಶಕ್ತಿ ದೇವತೆಗಳ ಕೊಂಡಕ್ಕೆ ರಾಮನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಂದ ಸೌಧೆ ಸಮರ್ಪಿಸಿದರು.

ಬಾಕ್ಸ್‌..............

ಹೂವಿನ ಕರಗ:

ಮಂಗಳವಾರ ರಾತ್ರಿ ಚಾಮುಂಡೇಶ್ವರಿ, ಸೇರಿದಂತೆ ಇತರೆ ಶಕ್ತಿ ದೇವತೆಗಳ ಹೂವಿನ ಕರಗ ಅದ್ಧೂರಿಯಾಗಿ ಜರುಗಿತು. ನಗರ ಪ್ರದಕ್ಷಿಣೆ ಹಾಕಿದ ಕರಗಗಳು ದೇವಾಲಯಗಳಲ್ಲಿ ಹಾಗೂ ಭಕ್ತರಿಂದ ಪೂಜೆ ಸ್ವೀಕಾರ ಮಾಡಿತು. ಇನ್ನು ಕೆಲವು ಕಡೆ ರಸ್ತೆಗೆ ಹೂವಿನಿಂದ ವಿವಿಧ ಬಗೆಯ ರಂಗೊಲೆ ಹಾಕಿ ಕರಗಕ್ಕೆ ಸ್ವಾಗತ ಕೋರಿದರು. ಇಡೀ ರಾತ್ರಿ ಪ್ರದಕ್ಷಣೆ ಹಾಕಿ, ಬುಧವಾರ ಬೆಳಗ್ಗೆ ಆಯಾಯ ದೇವತೆಗಳ ಕರಗಗಳು ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ ಅಗ್ನಿಕೊಂಡ ಪ್ರವೇಶಿಸಲಿವೆ.14ಕೆಆರ್ ಎಂಎನ್ 2,3.ಜೆಪಿಜಿ

2.ರಾಮನಗರದಲ್ಲಿ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವ ಪ್ರಯುಕ್ತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

3.ರಾಮನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರು ಎತ್ತಿನ ಗಾಡಿಗಳಲ್ಲಿ ಸೌಧೆ ತರುತ್ತಿರುವುದು.