ಸಾರಾಂಶ
ಹಿಚ್ಕಡದಲ್ಲಿ ಮೈದಾನ ಎದುರಿನ ಗೊಂಬಳಿ ಮರದ ಕೆಳಗೆ ಅನಾದಿಕಾಲದಿಂದಲೂ ಶ್ರೀ ಮಹಾಸತಿ ವಿಗ್ರಹವಿತ್ತು. ಇದನ್ನು ಈ ಭಾಗದ ಜನತೆ ಭಕ್ತಿಯಿಂದ ಮಾಸ್ತಿಮನೆ ಎಂದೂ ಕರೆಯುತ್ತಿದ್ದರು.
ಅಂಕೋಲಾ:
ಇಲ್ಲೊಬ್ಬ ಆಸಾಮಿ ಶ್ರೀದೇವರ ಬೃಹತ್ ವಿಗ್ರಹವನ್ನೆ ಕಯ್ದೊಯ್ದು, ತನ್ನ ಮನೆ ತೋಟದ ಹಿತ್ತಲಲ್ಲಿ ಪ್ರತಿಷ್ಠಾಪಿಸಿರುವ ಕೂತುಹಲಕಾರಿ ಘಟನೆಯೊಂದು ತಾಲೂಕಿನಲ್ಲಿ ನಡೆದಿದೆ.ಹೌದು.. ಇತಂಹದೊಂದು ಅಪರೂಪದ ಘಟನೆ ನಡೆದದ್ದು ಹಿಚ್ಕಡದಲ್ಲಿ. ಇಲ್ಲಿನ ಮೈದಾನ ಎದುರಿನ ಗೊಂಬಳಿ ಮರದ ಕೆಳಗೆ ಅನಾದಿಕಾಲದಿಂದಲೂ ಶ್ರೀ ಮಹಾಸತಿ ವಿಗ್ರಹವಿತ್ತು. ಇದನ್ನು ಈ ಭಾಗದ ಜನತೆ ಭಕ್ತಿಯಿಂದ ಮಾಸ್ತಿಮನೆ ಎಂದೂ ಕರೆಯುತ್ತಿದ್ದರು. ಶ್ರೀ ದೇವರಿಗೆ ಪ್ರತಿ ವಾರವು ಪೂಜೆಯು ನಡೆಯುತ್ತಿತ್ತು. ಆದರೆ, ಗುರುವಾರ ಬೆಳಗ್ಗೆ ಮಾತ್ರ 3.5 ಅಡಿ ಎತ್ತರದ ವಿಗ್ರಹ ಕಣ್ಮರೆಯಾಗಿತ್ತು. ಈ ಘಟನೆ ಜನತೆಗೆ ಆತಂಕಕ್ಕೆ ಕಾರಣವಾಗಿತ್ತು. 4 ಅಡಿ ಆಳಕ್ಕೆ ಅಗೆದು ಮೂರ್ತಿ ತೆಗೆದುಕೊಂಡು ಹೋಗಲಾಗಿತ್ತು. ನಿಧಿಗಳ್ಳರ ಕೈಗೆ ಈ ಮೂರ್ತಿ ವಶವಾಯಿತೇ ಎಂಬ ಸಂಶಯದಲ್ಲಿ ಗ್ರಾಮಸ್ಥರು ಅಂಕೋಲಾ ಪೊಲೀಸರ ಗಮನಕ್ಕೆ ತಂದಿದ್ದರು.ತಕ್ಷಣ ಕಾರ್ಯಪ್ರವೃತ್ತರಾದ ಪಿಎಸೈ ಸುಹಾಸ ಅವರು ಈ ವಿಗ್ರಹ ತಳಗದ್ದೆಯ ಮುಕುಂದ ಗೋವಿಂದ ಗೌಡ ಅವರ ಮನೆಯ ಹಿಂಬದಿಯ ಹಿತ್ತಲಲ್ಲಿ ಹೂವಿನಿಂದ ಅಲಂಕಾರ ಭೂಷಿತನಾಗಿ ಇಟ್ಟಿರುವುದನ್ನು ಪತ್ತೆ ಹಚ್ಚಿದ್ದರು. ಹಿಚ್ಕಡದ ಗ್ರಾಮಸ್ಥರು 5 ಕಿಮೀ ಅಂತರದಲ್ಲಿರುವ ತಳಗದ್ದೆಗೆ ಹೋದಾಗ, ತಮ್ಮೂರಲ್ಲಿ ಇರಬೇಕಾದ ಮಾಸ್ತಿಮನೆಯ ಮೂರ್ತಿಯು ತಳಗದ್ದೆಯಲ್ಲಿ ಇರುವದನ್ನು ಕಂಡು ಹೌಹಾರಿದರು.ಪೊಲೀಸರು ಮುಕುಂದ ಗೋವಿಂದ ಗೌಡ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ನನಗೆ ಸುಂದರವಾದ ಕಲಾ ಕೆತ್ತನೆ ಮಾಡುವ ಕಲೆ ಇದೆ. ಹಾಗಾಗಿ ರಾತ್ರಿ ನಾನೊಬ್ಬನೆ ಹಿಚ್ಕಡಕ್ಕೆ ತೆರಳಿ ಮೂರ್ತಿ ಅಗೆದು ತಂದಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ವಿಗ್ರಹ ನಾಪತ್ತೆ ಹಿಂದಡೆ ಇರುವ ಅಸಲಿಯತ್ತು ಏನು? ನಿಧಿಗಳ್ಳತವೆ? ಅಥವಾ ಘಟನೆಗೆ ಇನ್ನಿತರ ಕಾರಣ ಏನೆಂಬುದು ತನಿಖೆಯಿಂದ ತಿಳಿದು ಬರಲಿದೆ.ಸಂಧಾನ ಮೂಲಕ ಪ್ರಕರಣ ಇತ್ಯರ್ಥ:ಈ ಪ್ರಕರಣವು ಅಂಕೋಲಾ ಪೊಲೀಸ್ ಠಾಣೆಯ ಮೆಟ್ಟಿಲೆರಿತ್ತು. ಆದರೆ ಮುಕುಂದ ಗೌಡ ತಪ್ಪೊಪ್ಪಿಕೊಂಡು, ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ನೂತನ ಮೂರ್ತಿ ಮಾಡಿಕೊಡುತ್ತೇನೆ. ನನ್ನನ್ನು ಕ್ಷಮಿಸಿ ಬಿಡಿ ಎಂದು ಗೊರೆರದುಕೊಂಡಿದ್ದ. ಸಹೃದಯಿ ಗ್ರಾಮಸ್ಥರು ಮಾನವೀಯತೆ ತೋರಿ, ಪ್ರಕರಣವನ್ನು ಅಲ್ಲಿಯೆ ಕೈ ಬಿಟ್ಟು ಸಂಧಾನ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಂಡಿದ್ದಾರೆ.ಈ ದೊಡ್ಡ ಮೂರ್ತಿಯನ್ನು ಒಬ್ಬನೆ ಅಗೆದು ರಿಕ್ಷಾದಲ್ಲಿ ತರಲು ಸಾಧ್ಯವಿಲ್ಲ. ಇದರಲ್ಲಿ ಇನ್ನೊಂದು ಕೈ ಕೂಡ ಕೆಲಸ ಮಾಡಿದೆ ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.ಈ ವೇಳೆ ಮೊಕ್ತೇಸರರಾದ ವಿಠೋಬ ಬೊಮ್ಮಯ್ಯ ನಾಯಕ, ರಂಜನ ನಾಯಕ, ಪ್ರಮುಖರಾದ ಚೇತನ ನಾಯಕ, ಗುರು ನಾಯಕ, ಅಮೋಘ ನಾಯಕ, ಆದಿತ್ಯ ನಾಯಕ, ವಿಠೋಬ ಹಮ್ಮಣ್ಣ ನಾಯಕ, ರಾಮು ಹಿಚ್ಕಡ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಗೋಪು ನಾಯಕ ಹುಂಡಿಮನೆ ಉಪಸ್ಥಿತರಿದ್ದರು.