ಸಾರಾಂಶ
ಕಡಬ ತಾಲೂಕಿನ ಬಿಳಿನೆಲೆ ಕೈಕಂಬ ಜಂಕ್ಷನ್‌ನಲ್ಲಿ ಹೆದ್ದಾರಿಯ ಬದಿಯ ಬೃಹತ್ ಮರ ಸೋಮವಾರ ಬೆಳಗ್ಗೆ ಉರುಳಿ ಬಿತ್ತು. ಇದರ ಪರಿಣಾಮ ಇಬ್ಬರು ಗಾಯಗೊಂಡು, ಅಂಗಡಿ, ವಾಹನ ಜಖಂಗೊಂಡರು. ಬಳಿಕ ಮರ ತೆರವುಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಕೈಕಂಬ ಜಂಕ್ಷನ್‌ನಲ್ಲಿ ಹೆದ್ದಾರಿಯ ಬದಿಯ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಇಬ್ಬರು ಗಾಯಗೊಂಡು, ಅಂಗಡಿ, ವಾಹನ ಜಖಂಗೊಂಡ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.ಮರ ಬೀಳುವ ವೇಳೆ ಸಂಚರಿಸುತ್ತಿದ್ದ ಬಿಳಿನೆಲೆ ನೆಟ್ಟಣದ ಶೇಖರ್ ಎಂಬವರು ಚಲಾಯಿಸುತ್ತಿದ್ದ ಟಾಟಾಸುಮೋ ವಾಹನದ ಮೇಲೆಯೂ ಮರ ಬಿದ್ದಿದ್ದು ಚಾಲಕ ಶೇಖರ್ ತಲೆಗೆ ಗಾಯವಾಗಿದ್ದು, ವಾಹನ ಸಂಪೂರ್ಣ ಜಖಂಗೊಂಡಿದೆ. ಅಂಗಡಿಯಲ್ಲಿದ್ದ ರಾಜೇಶ್ ಎಂಬವರ ಕಾಲಿಗೂ ಗಾಯವಾಗಿದ್ದು, ಅಂಗಡಿಯೂ ಜಖಂಗೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ವಿದ್ಯುತ್ ಕಂಬಗಳಿಗೂ ಹಾನಿ ಸಂಭವಿಸಿದೆ.ಕಡಬ ತಹಸೀಲ್ದಾರ್ ಪ್ರಭಾಕರ ಕಜೂರೆ, ಉಪತಹಸೀಲ್ದಾರ್ ಮನೋಹರ್, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು, ಬಿಳಿನೆಲೆ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಕಡಬ ಪೊಲೀಸರು, ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳೀಯರ ಸಹಕಾರದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು ಹಾಗೂ ಮರದ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಲಾಯಿತು.
ಪರಿಹಾರಕ್ಕೆ ಆಗ್ರಹ:ಮರ ಬಿದ್ದು ಗಾಯಗೊಂಡ ಗಾಯಾಳುಗಳಿಗೆ ಸರಕಾರದಿಂದ ಪರಿಹಾರ ಒದಗಿಸುವಂತೆ ಹಾಗೂ ರಸ್ತೆ ಬದಿಯ ಅಪಾಯಕಾರಿ ಮರ ತೆರವುಗೊಳಿಸುವಂತೆ ಸ್ಥಳಕ್ಕೆ ಸೇರಿದ್ದ ಸಾರ್ವಜನಿಕರು ಆಗ್ರಹಿಸಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸ್ಥಳೀಯರ ಜೊತೆ ಮಾತುಕತೆ ನಡೆಸಿ, ಸರ್ಕಾರದಿಂದ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸುವ ಭರವಸೆ ನೀಡಿದರು. ಅಪಾಯಕಾರಿ ಮರಗಳ ತೆರವಿಗೆ ಗ್ರಾ.ಪಂ. ಮೂಲಕ ಮನವಿ ಬಂದಲ್ಲಿ ತೆರವಿಗೆ ಕ್ರಮಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿ ವಿಮಲ್ ಬಾಬು ತಿಳಿಸಿದರು.
;Resize=(128,128))
;Resize=(128,128))
;Resize=(128,128))