ಕಾಸರಗೋಡು ಜಿಲ್ಲೆಯ 15 ವರ್ಷದ ಬಾಲಕನಿಗೆ ಅತ್ಯಂತ ಸಂಕೀರ್ಣ ಹಾಗೂ ಹೆಚ್ಚಿನ ಅಪಾಯ ಹೊಂದಿದ್ದ ತಲೆಬುರುಡೆಯ ತಳಭಾಗದ ಶಸ್ತ್ರಚಿಕಿತ್ಸೆಯನ್ನು ಮಂಗಳೂರಿನ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಿದೆ.

ಮಂಗಳೂರು: ಕಾಸರಗೋಡು ಜಿಲ್ಲೆಯ 15 ವರ್ಷದ ಬಾಲಕನಿಗೆ ಅತ್ಯಂತ ಸಂಕೀರ್ಣ ಹಾಗೂ ಹೆಚ್ಚಿನ ಅಪಾಯ ಹೊಂದಿದ್ದ ತಲೆಬುರುಡೆಯ ತಳಭಾಗದ ಶಸ್ತ್ರಚಿಕಿತ್ಸೆಯನ್ನು ಮಂಗಳೂರಿನ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಿದೆ.

ಸಂಜಯ್ ಕುಮಾರ್ ಅವರಿಗೆ ಜುವೆನೈಲ್ ನಾಸೊಫ್ಯಾರಿಂಜಿಯಲ್ ಆಂಜಿಯೋಫೈಬ್ರೋಮಾ ಎಂಬ ಅಪರೂಪದ, ಕ್ಯಾನ್ಸರ್ ಅಲ್ಲದಿದ್ದರೂ ಸ್ಥಳೀಯವಾಗಿ ಆಕ್ರಮಣಕಾರಿಯಾಗಿ ಬೆಳೆಯುವ ರಕ್ತನಾಳಗಳಿಂದ ಸಮೃದ್ಧವಾಗಿರುವ ಗೆಡ್ಡೆ ಇರುವುದು ಪತ್ತೆಯಾಗಿತ್ತು. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ, ಪಾರ್ಶ್ವವಾಯು ಹಾಗೂ ದೃಷ್ಟಿ ಕಳೆದುಕೊಳ್ಳುವಂತಹ ಗಂಭೀರ ಅಪಾಯಗಳಿದ್ದವು.

ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಎ.ಜೆ.ಆಸ್ಪತ್ರೆಯ ಕನ್ಸಲ್ಟೆಂಟ್ ಸರ್ಜಿಕಲ್ ಆಂಕಾಲಜಿಸ್ಟ್ ಮತ್ತು ರೋಬೋಟಿಕ್ ಸರ್ಜನ್ ಡಾ.ಅಜಯ್ ಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು. ಕನ್ಸಲ್ಟೆಂಟ್ ಇಎನ್‌ಟಿ ಸರ್ಜನ್ ಡಾ.ದೀಪಲಕ್ಷ್ಮಿ, ಕನ್ಸಲ್ಟೆಂಟ್ ಪ್ಲಾಸ್ಟಿಕ್ ಸರ್ಜನ್, ಅರಿವಳಿಕೆ ಮತ್ತು ಕ್ರಿಟಿಕಲ್ ಕೇರ್ ತಜ್ಞ ಡಾ.ಸನತ್ ಭಂಡಾರಿ ಅವರನ್ನೊಳಗೊಂಡ ಬಹುವಿಭಾಗೀಯ ತಂಡ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿತು.

ವೈದ್ಯರ ತಂಡ ಮೋಡಿಫೈಡ್‌ ಮ್ಯಾಕ್ಸಿಲರ್‌ ಸ್ವಿಂಗ್‌ ಎಂಬ ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸಾ ವಿಧಾನವನ್ನು ಬಳಸಿಕೊಂಡು ಸೂಕ್ಷ್ಮ ಮೈಕ್ರೋಸರ್ಜಿಕಲ್ ವಿಧಾನದಲ್ಲಿ ಗಡ್ಡೆಯನ್ನು ಕ್ಯಾರೋಟಿಡ್ ಧಮನಿ ಮತ್ತು ಆಪ್ಟಿಕ್ ನರದಿಂದ ಸುರಕ್ಷಿತವಾಗಿ ಬೇರ್ಪಡಿಸಿ ಯಶಸ್ವಿಯಾಗಿ ತೆಗೆದುಹಾಕಲಾಯಿತು. ಬಾಲಕನ ದೃಷ್ಟಿ ಹಾಗೂ ಪ್ರಮುಖ ನರ ಕಾರ್ಯಗಳನ್ನು ಸಂರಕ್ಷಿಸಲಾಗಿದೆ.

ಡಾ.ಅಜಯ್ ಕುಮಾರ್ ಮಾತನಾಡಿ, ಬಾಲಕನ ದೃಷ್ಟಿ ಮತ್ತು ನರಗಳ ಕಾರ್ಯಗಳನ್ನು ಸಂರಕ್ಷಿಸುವುದೇ ನಮ್ಮ ಪ್ರಮುಖ ಆದ್ಯತೆಯಾಗಿತ್ತು ಎಂದರು.

ಸಂಜಯ್ ತಾಯಿ ಸಂಧ್ಯಾ ಮಾತನಾಡಿ, ಎ.ಜೆ. ಆಸ್ಪತ್ರೆಯ ಸಂಪೂರ್ಣ ತಂಡದ ಆರೈಕೆ, ಸಹಕಾರ ಮತ್ತು ಸಮರ್ಪಣೆಗೆ ನಾವು ಸದಾ ಕೃತಜ್ಞರಾಗಿರುತ್ತೇವೆ ಎಂದರು.

ಸಂಜಯ್ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮರುದಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಪ್ರಸ್ತುತ ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.