ಸಾರಾಂಶ
ಬೆಂಗಳೂರು : ಪತ್ರಕರ್ತರೊಬ್ಬರ ಪತ್ನಿಯ ಮುಖಕ್ಕೆ ಆ್ಯಸಿಡ್ ಹಾಕುವುದಾಗಿ ನಗರದ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಕಂಪನಿ ಆ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದೆ.
ಈ ಸಂಬಂಧ ಪತ್ರಕರ್ತ ಶಹಬಾಜ್ ಅನ್ಸರ್ ಎಂಬುವವರು ತಮ್ಮ ‘ಎಕ್ಸ್’ ಖಾತೆಯಲ್ಲಿ ನಿಖಿತ್ ಶೆಟ್ಟಿ ಎಂಬಾತನ ಬೆದರಿಕೆ ಸಂದೇಶದ ಪೋಸ್ಟ್ ಹಂಚಿಕೊಂಡಿದ್ದಾರೆ.
‘ನಿನ್ನ ಪತ್ನಿಗೆ ಕರ್ನಾಟಕದಲ್ಲಿ ಸರಿಯಾದ ಬಟ್ಟೆ ಹಾಕಿಕೊಳ್ಳಲು ಹೇಳು. ಇಲ್ಲವಾದರೆ, ನಾನು ಆಕೆಯ ಮುಖಕ್ಕೆ ಆ್ಯಸಿಡ್ ಹಾಕುತ್ತೇನೆ’ ಎಂದು ನಿಖಿತ್ ಶೆಟ್ಟಿ ಎಂಬಾತ ಬೆದರಿಕೆ ಹಾಕಿದ್ದಾನೆ. ಈತನ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಪತ್ರಕರ್ತ ಶಹಬಾಜ್ ಅನ್ಸರ್ ತಮ್ಮ ಎಕ್ಸ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ದೂರು ನೀಡಿದ್ದಾರೆ. ನೆಟ್ಟಿಗರು ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.
ಆರೋಪಿ ಕೆಲಸದಿಂದ ವಜಾ
ನಗರದ ‘ಇಟಿಯಸ್ ಡಿಜಿಟಲ್ ಸರ್ವಿಸಸ್’ ಕಂಪನಿಯು ತನ್ನ ಉದ್ಯೋಗಿ ನಿಖಿತ್ ಶೆಟ್ಟಿಯನ್ನು ಕೆಲಸದಿಂದ ವಜಾಗೊಳಿಸಿದೆ. ನಮ್ಮ ಉದ್ಯೋಗಿ ನಿಖಿತ್ ಶೆಟ್ಟಿ ಮತ್ತೊಬ್ಬರ ಬಟ್ಟೆಯ ಆಯ್ಕೆ ಕುರಿತು ಬೆದರಿಕೆ ಹಾಕಿರುವ ಗಂಭೀರ ವಿಚಾರವನ್ನು ತಿಳಿದು ದುಃಖಿತರಾಗಿದ್ದೇವೆ. ಈತನ ನಡವಳಿಕೆ ಸ್ವೀಕಾರಾರ್ಹವಲ್ಲ. ಇದು ನಮ್ಮ ಕಂಪನಿಯ ಮೌಲ್ಯಗಳಿಗೆ ವಿರುದ್ಧವಾಗಿದೆ.
ಕಂಪನಿಯು ಉದ್ಯೋಗಿಗಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಬದ್ಧವಾಗಿದೆ. ನಿಖಿತ್ ಶೆಟ್ಟಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈತನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಇಟಿಯಸ್ ಡಿಜಿಟಲ್ ಸರ್ವಿಸಸ್ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.