ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಪತ್ರಕರ್ತ ಸದಾ ವಿದ್ಯಾರ್ಥಿಯಾಗಿರಬೇಕು ಅಂದಾಗ ಮಾತ್ರ ತೀಕ್ಷ್ಣ ಬುದ್ಧಿಯ ಮೌಲ್ಯ ಮಾಪಕನಾದ ಓದುಗನ ಮುಂದೆ ತೇರ್ಗಡೆಯಾಗಿ ಪತ್ರಿಕಾಂಗದಲ್ಲಿ ಬಹುಕಾಲ ಬಾಳಿ ಬದುಕಬಲ್ಲ ಎಂದು ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಅಭಿಪ್ರಾಯಪಟ್ಟರು.ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರಿಗೆ ಗೌರವ ಸನ್ಮಾನ ಕಾರ್ಯಕ್ರಮ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ, ಒಬ್ಬ ವಿಧ್ಯಾರ್ಥಿ ತನ್ನ ಅಧ್ಯಯನ ವಿಷಯವನ್ನು ಶೋಧಿಸಿ ಸಂಗ್ರಹಿಸಿ ಪರೀಕ್ಷೆಯಲ್ಲಿ ಒಳ್ಳೆಯ ಬರವಣಿಗೆ ಮೂಲಕ ಪ್ರಸ್ತುತ ಪಡಿಸುತ್ತಾನೆ. ಅದರಂತೆ ಪತ್ರಕರ್ತ ಹೊಸ ಹೊಸ ಸುದ್ದಿಗಳನ್ನು ಶೋಧಿಸಿ ಸಂಗ್ರಹಿಸಿ ಓದುಗನ ಮುಂದೆ ಸುಂದರವಾಗಿ ಪ್ರಸ್ತುತಪಡಿಸಬೇಕಾಗುತ್ತದೆ. ಅದಕ್ಕಾಗಿ ಪತ್ರಕರ್ತ ಸದಾ ವಿದ್ಯಾರ್ಥಿಯಾಗಿರಬೇಕಾಗುತ್ತೆ. ಪರೀಕ್ಷೆಯಲ್ಲಿ ವಿದ್ಯಾರ್ಥಿ ಹೆಸರು ಸುದ್ದಿಯಲ್ಲಿ ಪತ್ರಕರ್ತ ಹೆಸರು ಅಪ್ರಸ್ತುತವಾಗುತ್ತದೆ ಎಂದರು.
ಮೂಡಲಗಿ ಶಿಕ್ಷಣ ಸಂಸ್ಥೆ ನನಗೂ ಸೇರಿದಂತೆ ಎಲ್ಲ ಪತ್ರಕರ್ತರಿಗೂ ವಿದ್ಯಾದಾನ ಮಾಡಿದ್ದು, ಅದರ ಋಣ ನಮ್ಮೆಲ್ಲರ ಮೇಲಿದೆ. ಈಗ ಅದೇ ತನ್ನ ಮಕ್ಕಳನ್ನು ಗುರುತಿಸಿ ಗೌರವಿಸುತ್ತಿದೆ ಅದಕ್ಕೆ ನಾವೆಲ್ಲರೂ ಚೀರಋಣಿಯಾಗಿದ್ದೇವೆ ಎಂದರು.ಸಾಹಿತಿ, ಹಿರಿಯ ಪತ್ರಕರ್ತ ಹಾಗೂ ನಿವೃತ್ತ ಗ್ರಂಥಪಾಲಕ ಬಾಲಶೇಖರ ಬಂದಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಮುದ್ರಣ ಮಾಧ್ಯಮ ಉಳಿಯಲು ಅವುಗಳು ಹೊತ್ತು ತರುವ ಕರಾರುವಾಕ್ಕಾದ ಮಾಹಿತಿ, ವಿಷಯ, ಜ್ಞಾನವೇ ಕಾರಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ, ಯಾವ ರಾಜಕಾರಣಿ ಅಥವಾ ಅಧಿಕಾರಿ ಪ್ರಭಾವ ಮಾಡಲಾರದ ಕೆಲಸವನ್ನು ಒಬ್ಬ ಪತ್ರಕರ್ತ ಬರೆಯುವ ಸುದ್ದಿಗಳು ಮಾಡುತ್ತವೆ. ಮೂಡಲಗಿ ಪಟ್ಟಣ ಸುಧಾರಣೆ ಮೇಲೆ ಬೆಳಕು ಚೆಲ್ಲವು ಕೆಲಸಗಳನ್ನು ಪತ್ರಕರ್ತರು ಮಾಡಬೇಕು ಎಂದರು.ಸಂಸ್ಥೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸಗಳನ್ನು ಪತ್ರಿಕೆಗಳು ಮಾಡುತ್ತಿವೆ ಅಂತಹ ಪತ್ರಿಕೆಗಳಲ್ಲಿ ಕೆಲಸಮಾಡುವ ಪತ್ರಕರ್ತರನ್ನು ಗೌರವಿಸುವದು ನಮ್ಮ ಜವಾಬ್ದಾರಿ ಎಂದರು.
ವೇದಿಕೆಯಲ್ಲಿ ಸಂಸ್ಥೆ ಉಪಾಧ್ಯಕ್ಷ ರವೀಂದ್ರ ಪಿ.ಸೋನವಾಲಕರ, ನಿರ್ದೇಶಕರಾದ ಎ.ವಿ. ಹೊಸಕೋಟಿ, ಬಿ.ಎಚ್. ಸೋನವಾಲಕರ, ಅನೀಲ ಸತರಡ್ಡಿ, ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಉಪಸ್ಥಿತರಿದ್ದರು. ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಡಾ.ಎಂ.ಕೆ. ಕಂಕಣವಾಡಿ, ಎಸ್.ಎಸ್.ಆರ್ ಪ್ರೌಢಶಾಲೆಯ ಉಪಪ್ರಾಚಾರ್ಯ ಬಿ.ಕೆ. ಕಾಡಪ್ಪಗೋಳ, ಗ್ರಂಥಪಾಲಕ ಡಾ.ಬಸವಂತ ಬರಗಾಲಿ ಉಪಸ್ಥಿತರಿದ್ದರು.ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮೂಡಲಗಿ ತಾಲೂಕು ಘಟಕದ ಅಧ್ಯಕ್ಷ ಕೃಷ್ಣಪ್ಪ ಗಿರೆಣ್ಣವರ, ಉಪಾಧ್ಯಕ್ಷ ಲಿಂಗಪ್ಪ ಗಾಡವಿ, ಪ್ರಧಾನ ಕಾರ್ಯದರ್ಶಿ ಮಲ್ಲು ಬೋಳನವರ, ಕಾರ್ಯದರ್ಶಿಗಳಾದ ವೆಂಕಟೇಶ ಬಾಲರಡ್ಡಿ, ಅಲ್ತಾಪ ಹವಾಲ್ದಾರ ಮತ್ತು ಸಾಹಿತಿ ಮತ್ತು ಪತ್ರಕರ್ತ ಬಾಲಶೇಖರ ಬಂದಿ, ಭೀಮಶಿ ತಳವಾರ, ಸುಭಾಸ ಕಡಾಡಿ, ಶಿವಾನಂದ ಮೂಧೋಳ ಸೇರಿದಂತೆ ಪಟ್ಟಣದ ಅನೇಕ ಪತ್ರಕರ್ತರನ್ನು ಮೂಡಲಗಿ ಶಿಕ್ಷಣ ಸಂಸ್ಥೆಯಿಂದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಪ್ರಾಚಾರ್ಯ ಪ್ರೊ.ಎಸ್.ಎಂ.ಗುಜಗೊಂಡ ಸ್ವಾಗತಿಸಿದರು. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿ ಡಾ.ಎಸ್.ಎಲ್. ಚಿತ್ರಗಾರ ನಿರೂಪಿಸಿದರು. ಪ.ಪೂ. ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ.ಎಂ.ಎಸ್.ಪಾಟೀಲ ವಂದಿಸಿದರು.