ಸಾರಾಂಶ
ದಂಬದಹಳ್ಳಿಯ ಮಾರಿಕಟ್ಟೆ ಬಳಿ ಬಿಡಾರ । ಯಾವುದೇ ಆನೆಗೂ ಕಾಲರ್ ಐಡಿ ಇಲ್ಲ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸುಮಾರು 60 ಆನೆಗಳ ಹಿಂಡಿನಿಂದ ಬೇರ್ಪಟ್ಟು ಕಳೆದ ಒಂದು ವಾರದಿಂದ ಮೂಡಿಗೆರೆ ತಾಲೂಕು ಮುಗಿಸಿ ಚಿಕ್ಕಮಗಳೂರು ತಾಲೂಕಿನಲ್ಲಿ ಜರ್ನಿ ಮುಂದುವರಿಸಿರುವ ಸುಮಾರು 18 ಕಾಡಾನೆಗಳ ಹಿಂಡು ಭಾನುವಾರ ಜಿಲ್ಲಾ ಕೇಂದ್ರದತ್ತ ಮುಖ ಮಾಡಿದೆ.
ಚಿಕ್ಕಮಗಳೂರು- ಮೂಡಿಗೆರೆ ರಸ್ತೆಯಲ್ಲಿರುವ ದಂಬದಹಳ್ಳಿಯ ಗುಡ್ಡದ ಬಳಿ ಇರುವ ಮಾರಿಕಟ್ಟೆಯಲ್ಲಿ ಈ ಎಲ್ಲಾ ಆನೆಗಳು ಬಿಡಾರ ಹೂಡಿವೆ. ಇದರಿಂದ ಅರಣ್ಯ ಇಲಾಖೆಗೆ ತಲೆ ಬಿಸಿಯಾಗಿದೆ.ಕಾರಣ, ಈ ಗುಂಪಿನಲ್ಲಿರುವ ಯಾವುದೇ ಆನೆ ಕೊರಳಿನಲ್ಲಿ ಕಾಲರ್ ಐಡಿ ಇಲ್ಲ. ಭುವನೇಶ್ವರಿ, ಬೀಟಮ್ಮ- 1 ಹಾಗೂ ಬೀಟಮ್ಮ- 2 ಆನೆಗಳ ಹಿಂಡಿನಲ್ಲಿ ಇದ್ದಿದ್ದರೆ ಅರಣ್ಯ ಇಲಾಖೆಯ ಕಚೇರಿಯಲ್ಲಿಯೇ ಕುಳಿತು ಗುಂಪಿನ ಚಲನವಲನದ ಮೇಲೆ ನಿಗಾ ಇಡಬಹುದಾಗಿತ್ತು. ಇದೀಗ ಗುಂಪಿನ ಮೇಲೆ ನಿಗಾ ಇಡುವುದು ಸವಾಲಾಗಿದೆ.
ಸುಮಾರು 25 ಅರಣ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಬೆಳಗಿನ ಸಮಯದಲ್ಲಿ ಮಾತ್ರ ಅವುಗಳನ್ನು ಹಿಂಬಲಿಸ ಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಈ ರೀತಿ ಕಾರ್ಯಾಚರಣೆ ಮುಂದುವರೆಸಲು ಆಗುತ್ತಿಲ್ಲ. ಇನ್ನೊಂದೆಡೆ ಹಿಂಡಿನಲ್ಲಿರುವ ಆನೆಗಳನ್ನು ಓಡಿಸಲು ಸಾಧ್ಯವಿಲ್ಲ. ಈ ಆನೆಗಳ ಗುಂಪಿನಲ್ಲಿ ಮರಿ ಆನೆಗಳು ಸಹ ಇವೆ. ಶನಿವಾರವಷ್ಟೇ ವಿದ್ಯುತ್ ಸ್ಪರ್ಶ ದಿಂದ 30 ವರ್ಷ ವಯಸ್ಸಿನ ಆನೆ ಮೃತಪಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಆನೆಗಳು ಓಡಿಸಲು ಯತ್ನಿಸಿದರೆ ಅಪಾಯವೇ ಹೆಚ್ಚು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.ಅವುಗಳ ಮೇಲೆ ನಿಗಾ ಇಡಬೇಕಷ್ಟೇ, ಕೆಣಕಿದರೆ ಪ್ರತಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಅವುಗಳು ದಂಬದಹಳ್ಳಿಯ ಮಾರಿಕಟ್ಟೆಯಿಂದ ಹಿಂದಕ್ಕೆ ಹೋದರೆ ಸಮಸ್ಯೆ ಆಗಲಾರದು, ನಗರದ ಜನ ವಸತಿ ಪ್ರದೇಶಕ್ಕೆ ಪ್ರವೇಶ ಮಾಡಿದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಲಿದೆ ಎಂದು ಹೇಳಿದ್ದಾರೆ.ಮುಂಜಾಗ್ರತಾ ಕ್ರಮ:
ಕಾಡಾನೆಗಳ ಸಂಚಾರ ಇರುವ ಪ್ರದೇಶಗಳಾದ ಚಿಕ್ಕಮಗಳೂರು ತಾಲೂಕಿನ ತುಡಕೂರು, ಆಲ್ದೂರು ಹೊಸಹಳ್ಳಿ, ತೋರಣ ಮಾವು, ಚಿತ್ತುವಳ್ಳಿ, ಆಲ್ದೂರುಪುರ, ಮಡೆನೆರಲು, ದೊಡ್ಡಮಾಗರವಳ್ಳಿ, ಗುಲ್ಲನ್‌ಪೇಟೆ, ಹಾಂದಿ, ಕೆಳಗೂರು ಗ್ರಾಮಗಳ ಸುತ್ತಮುತ್ತ ನ. 9 ರಾತ್ರಿ 7 ಗಂಟೆಯಿಂದ ನ. 10 ರಾತ್ರಿ 9 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಚಿಕ್ಕಮಗಳೂರು ತಾಲೂಕು ದಂಡಾಧಿಕಾರಿ ಡಾ. ಸುಮಂತ್ ಆದೇಶ ಹೊರಡಿಸಿದ್ದರು. ಆದರೆ, ಈ ಗ್ರಾಮಗಳ ವ್ಯಾಪ್ತಿಯನ್ನು ದಾಟಿ ಆನೆಗಳು ದಂಬದಹಳ್ಳಿ ಸಮೀಪಕ್ಕೆ ಬಂದಿವೆ.ಮರಣೋತ್ತರ ಪರೀಕ್ಷೆ:ಆಲ್ದೂರು ಸಮೀಪದ ಪುರ ಬಳಿ ಶನಿವಾರ ಮೃತಪಟ್ಟ ಆನೆ ಸುತ್ತ ಇತರೆ ಆನೆಗಳು ಇದ್ದರಿಂದ ಶನಿವಾರ ಮರಣೋತ್ತರ ಪರೀಕ್ಷೆ ಮಾಡಲು ಆಗಿರಲಿಲ್ಲ. ಅವುಗಳು ಬೆಳಿಗ್ಗೆ ಸ್ಥಳದಲ್ಲಿ ಇರಲಿಲ್ಲ. ಹಾಗಾಗಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಆನೆ ಮೃತಪಟ್ಟ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ಮಾಡಲಾಯಿತು.
ವೈದ್ಯರಾದ ಡಾ. ರಶ್ಮಿ ಹಾಗೂ ಡಾ. ಪ್ರಕಾಶ್ ಅವರು ಮರಣೋತ್ತರ ಪರೀಕ್ಷೆ ಮಾಡಿದರು. ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರಕುಮಾರ್ ಸಿಂಗ್, ಚಿಕ್ಕಮಗಳೂರು ಡಿಎಫ್‌ಓ ರಮೇಶ್ ಬಾಬು ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. 10 ಕೆಸಿಕೆಎಂ 5ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಕಾಡಾನೆ ಮರಣೋತ್ತರ ಪರೀಕ್ಷೆ ನಡೆಸಿ ಅದೇ ಸ್ಥಳದಲ್ಲಿ ಭಾನುವಾರ ಮೃತ ದೇಹವನ್ನು ಸುಡಲಾಯಿತು.