ಗದಗ: ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ಬುಧವಾರ ನಗರದಲ್ಲಿ ಆಯೋಜಿಸಿದ್ದ ಬೃಹತ್ 100 ಮೀಟರ್ ಉದ್ದದ ತ್ರಿವರ್ಣ ಧ್ವಜ ಹಿಡಿದು ಸಾಗಿದ ತಿರಂಗಾ ಯಾತ್ರೆಯು ಸಾರ್ವಜನಿಕರಲ್ಲಿ ಹರ್ಷ, ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ದೇಶಭಕ್ತಿಯ ಅಭೂತಪೂರ್ವ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು.
ನಗರದ ಹಾತಲಗೇರಿ ನಾಕಾದಿಂದ ವಿಜೃಂಭಣೆಯಿಂದ ಆರಂಭಗೊಂಡ ಯಾತ್ರೆಯು ಕೆ.ಸಿ. ರಾಣಿ ರಸ್ತೆ ಮಾರ್ಗವಾಗಿ ರೋಟರಿ ವೃತ್ತ, ಹಳೇ ಬಸ್ ನಿಲ್ದಾಣ, ಟಾಂಗಾಕೂಟ ಹಾಗೂ ಮಹೇಂದ್ರಕರ ವೃತ್ತದ ಮೂಲಕ ಸಾಗಿ ತೋಂಟದಾರ್ಯ ಮಠದ ಆವರಣದಲ್ಲಿ ಸಂಪನ್ನಗೊಂಡಿತು. ಸಾವಿರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಹೆಜ್ಜೆಗೆ ಹೆಜ್ಜೆ ಹಾಕಿ ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಇದರೊಟ್ಟಿಗೆ ಮೊಳಗಿದ ದೇಶಭಕ್ತಿ ಗೀತೆಗಳು ನಗರದ ಪ್ರಮುಖ ರಸ್ತೆಗಳಲ್ಲಿನ ಜನರಲ್ಲಿ ದೇಶಭಕ್ತಿ ಹೆಚ್ಚಿಸಿದವು.ಅದರಲ್ಲಿಯೂ ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನದ ತುಂಬಾ ರಾಷ್ಟ್ರಧ್ವಜಗಳನ್ನು ಜೋಡಿಸಿಕೊಂಡು ಯಾತ್ರೆಯಲ್ಲಿ ಸಾಗಿದ್ದು ವಿಶೇಷ ಆಕರ್ಷಣೆಯಾಗಿತ್ತು. ರಸ್ತೆಯ ಎರಡೂ ಬದಿಗಳಲ್ಲಿ, ಮನೆ ಹಾಗೂ ವಾಣಿಜ್ಯ ಮಳಿಗೆಗಳ ಮಹಡಿಗಳ ಮೇಲೆ ನಿಂತಿದ್ದ ಜನರು ಈ ನೂರು ಮೀಟರ್ ಬೃಹತ್ ತಿರಂಗಾ ವೈಭವವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಂಭ್ರಮಿಸಿದರು.
ತೋಂಟದಾರ್ಯ ಮಠದ ಮುಂಭಾಗದಲ್ಲಿ ವಂದೇ ಮಾತರಂ ಹಾಗೂ ರಾಷ್ಟ್ರಗೀತೆ ಹಾಡುವ ಮೂಲಕ ಭಾರತ ಮಾತೆಗೆ ಗೌರವ ಸಮರ್ಪಿಸಿ ಕಾರ್ಯಕ್ರಮ ಸಂಪನ್ನಗೊಂಡಿತು. ಯಾತ್ರೆಯುದ್ದಕ್ಕೂ ಕಂಡುಬಂದ ಶಿಸ್ತು, ಉತ್ಸಾಹ ಹಾಗೂ ದೇಶಪ್ರೇಮವನ್ನು ಮೂಡಿಸಿತು. ನೂರಾರು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ದೇಶಭಕ್ತಿಯ ಘೋಷಣೆಗಳ ಮೂಲಕ ಗಮನ ಸಳೆದರು.ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಸ್ವಾತಂತ್ರ್ಯ ದಿನದ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆ, ಅಂಗಡಿ ಹಾಗೂ ಸರ್ಕಾರಿ ಕಚೇರಿಗಳ ಮೇಲೆ ಹೆಮ್ಮೆಯಿಂದ ರಾಷ್ಟ್ರಧ್ವಜ ಹಾರಿಸಬೇಕು. ಪ್ರತಿಯೊಬ್ಬರಲ್ಲೂ ದೇಶವೇ ಮೊದಲು ಎಂಬ ಉದಾತ್ತ ಭಾವನೆ ನಿರಂತರವಾಗಿ ಬೆಳೆಯಬೇಕು ಎಂದರು.
ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಕಿಚ್ಚು ಹೆಚ್ಚಿಸಲು ಹಾಗೂ ಸಮರ್ಪಣಾ ಭಾವ ಮೂಡಿಸಲು ಈ ಯಾತ್ರೆ ಆಯೋಜಿಸಲಾಗಿದೆ. ದೇಶದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಒಂದಾಗಿ ರಾಷ್ಟ್ರಧ್ವಜ ಹಾರಿಸಿ, ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಬಿಜೆಪಿ ಮುಖಂಡ ಜಯತೀರ್ಥ ಕಟ್ಟಿ ಮಾತನಾಡಿ, ವಂದೇ ಮಾತರಂ ಗೀತೆ ರಚನೆಯಾಗಿ 150 ವರ್ಷಗಳು ಪೂರ್ಣಗೊಂಡಿವೆ. ಅಂದು ಈ ಗೀತೆಯ ಪ್ರೇರಣೆಯಿಂದಲೇ ಭಗತ್ ಸಿಂಗ್, ರಾಜಗುರು, ಸುಖದೇವ್ ಹಾಗೂ ರಾಂ ಪ್ರಸಾದ್ ಬಿಸ್ಮಿಲ್ ಅವರಂಥ ಅಸಂಖ್ಯಾತ ಕ್ರಾಂತಿಕಾರಿಗಳು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಇಂದು ಯುವಶಕ್ತಿ ಭಾರತವನ್ನು ಜಗದ್ಗುರುವಿನ ಸ್ಥಾನದಲ್ಲಿ ನಿಲ್ಲಿಸಲು ತನ್ನನ್ನು ತಾನು ಸಮರ್ಪಿಸಿಕೊಳ್ಳಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರನ್ನು ದಾರಿ ತಪ್ಪಿಸುವ ಕುತಂತ್ರಗಳು ನಡೆಯುತ್ತಿದ್ದು, ದೇಶವಿರೋಧಿ ಚಟುವಟಿಕೆಗಳು ಹೆಚ್ಚುತ್ತಿವೆ. ಹೀಗಾಗಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ದೇಶದ ಇತಿಹಾಸ, ಮಹತ್ವ ಹಾಗೂ ಗಡಿಯಲ್ಲಿ ಕಾಯುವ ಯೋಧರನ್ನು ಗೌರವಿಸುವುದನ್ನು ಬಾಲ್ಯದಿಂದಲೇ ಕಲಿಸಬೇಕು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದಗೌಡ ಪಾಟೀಲ, ಎಂ.ಎಸ್.ಕರಿಗೌಡ್ರ, ಪ್ರಶಾಂತ ನಾಯಕರ, ಮಹೇಶ ದಾಸರ, ನಗರಸಭೆಯ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಎಂ.ಎಂ.ಹಿರೇಮಠ ಸೇರಿದಂತೆ ಅನೇಕ ಮುಖಂಡರು ಇದ್ದರು.