ಸಾರಾಂಶ
‘ಕನ್ನಡ ಮಾತಾಡುವವರ ಕರೆದು ಅವರ ಬಾಯಿಗೆ ಮಿಠಾಯಿ, ಮಾತಾಡದವರಿಗೆ ಕನ್ನಡ ಕಲಿಕಾ ಪುಸ್ತಕ ವಿತರಣೆ’ ಭಾನುವಾರ ಇಂತದ್ದೊಂದು ವಿಶಿಷ್ಟ ಜಾಗೃತಿ ಅಭಿಯಾನವನ್ನು ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ನಗರದ ವಿವಿಧೆಡೆ ನಡೆಸಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಕನ್ನಡ ಮಾತಾಡುವವರ ಕರೆದು ಅವರ ಬಾಯಿಗೆ ಮಿಠಾಯಿ, ಮಾತಾಡದವರಿಗೆ ಕನ್ನಡ ಕಲಿಕಾ ಪುಸ್ತಕ ವಿತರಣೆ’ ಭಾನುವಾರ ಇಂತದ್ದೊಂದು ವಿಶಿಷ್ಟ ಜಾಗೃತಿ ಅಭಿಯಾನವನ್ನು ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ನಗರದ ವಿವಿಧೆಡೆ ನಡೆಸಿತು. ಕನ್ನಡ ಮಾತಾಡುವ ಪರ ಭಾಷಿಕರಿಗೆ, ಕನ್ನಡಿಗರಿ ಬಾಯಿಗೆ ಮಿಠಾಯಿ ತಿನ್ನಿಸಲಾಯಿತು. ಪರಭಾಷಿಕ ಗುಜರಾತಿಗಳಿಗೆ ಗುಜರಾತಿ-ಕನ್ನಡ, ತಮಿಳುನಾಡಿನವರಿಗೆ ತಮಿಳು-ಕನ್ನಡ ಕಲಿಕಾ ಪುಸ್ತಕಗಳನ್ನು ನೀಡಲಾಯಿತು.ಕುರುಬರಹಳ್ಳಿ ಕಾವೇರಿ ನಗರದ ಬಸ್ ನಿಲ್ದಾಣದ ಬಳಿ ಸಂಗೀತ ನಿರ್ದೇಶಕ ಹಂಸಲೇಖ, ಕನ್ನಡ ಪ್ರಾಧ್ಯಾಪಕ ಕೃಷ್ಣೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ, ಸ್ಪಂದನದ ಸಂಸ್ಥಾಪಕ ಎಂ.ಶಿವರಾಜು ಕನ್ನಡ ಮಾತನಾಡಿದವರಿಗೆ ಸಿಹಿ ತಿನ್ನಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಂದೆ ಜೆ.ಸಿ.ನಗರ, ಶಂಕರಮಠದ ಮೂಲಕ ಕಿರ್ಲೋಸ್ಕರ್ ಕಾಲೋನಿ, ಕೆಂಪೇಗೌಡ ಉದ್ಯಾನವನ, ಶಕ್ತಿಗಣಪತಿನಗರ, ಸಂಜಯ್ ಗಾಂಧಿನಗರ, ಕಮಲನಗರ, ಗೃಹಲಕ್ಷ್ಮಿ ಬಡಾವಣೆ, ಕಮಲನಗರ ಮಾರ್ಕೆಟ್, ಕಸ್ತೂರಿ ಬಡಾವಣೆ, ಶಂಕರ್ ನಾಗ್ ಬಸ್ ನಿಲ್ದಾಣದವರೆಗೆ ಈ ಅಭಿಯಾನವನ್ನು ನಡೆಸಿ ನೂರಾರು ಜನರಿಗೆ ಮಿಠಾಯಿ ತಿನ್ನಿಸುವ, ಪುಸ್ತಕ ವಿತರಿಸುವ ಪುಸ್ತಕ ನೀಡಲಾಯಿತು.ಪ್ರೊ.ಕೃಷ್ಣೇಗೌಡ ಮಾತನಾಡಿ,‘ಭಾಷೆಯನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ಕನ್ನಡಿಗರನ್ನು ನೋಡಿ ಕಲಿಯಬೇಕು. ಇಲ್ಲಿ ಜೀವನ ಕಟ್ಟಿಕೊಳ್ಳಲು ಬಂದ ಪರಭಾಷಿಕರು ಕನ್ನಡ ಕಲಿಯಬೇಕು. ಕನ್ನಡ ಎಂದರೆ ಜೀವನ ವಿಧಾನ. ಕನ್ನಡ ಭಾಷೆಯನ್ನು ಪ್ರೀತಿಯಿಂದ ಕಲಿಯಿರಿ’ ಎಂದು ಹೇಳಿದರು.
ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ರಾಜ್ಯ ಪೂರ್ಣ ಕನ್ನಡಮಯವಾಗಬೇಕು. ಕನ್ನಡ, ಕರ್ನಾಟಕ ಆಯಸ್ಕಾಂತದ ರೀತಿ. ದೇಶದ ವಿವಿಧೆಡೆಯ ಜನ ಆಕರ್ಷಿತರಾಗಿ ಇಲ್ಲಿಗೆ ಬರುತ್ತಿದ್ದಾರೆ. ಆದರೆ, ಕನ್ನಡ ಮೂಗು ಮುರಿಯುವುದು ಬೇಡ. ಕನ್ನಡ ಕಲಿತು ಇಲ್ಲಿ ಎಲ್ಲರೊಂದಿಗೆ ಒಂದಾಗಿ ಬಾಳಿ ಎಂದು ಹೇಳಿದರು. ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ, ರಾಜೀವ್ ಗೌಡ, ಬಿಬಿಎಂಪಿ ಮಾಜಿ ಸದಸ್ಯ ಎಸ್.ಕೇಶವಮೂರ್ತಿ ಸೇರಿ ಇತರರಿದ್ದರು.ಕನ್ನಡ ಜಾಗೃತಿ ಅಭಿಯಾನದಲ್ಲಿ ಹಾಲಕ್ಕಿ ಕುಣಿತ, ಸುಗ್ಗಿ ಕುಣಿತ, ಯಕ್ಷಗಾನ, ಡೊಳ್ಳು ಕುಣಿತ, ಮಹಿಳಾ ವೀರಗಾಸೆ, ಚಿಲಿಪಿಳಿ ಗೊಂಬೆ, ಮರಗಾಲು ಕುಣಿತ, ಹುಲಿ ವೇಷ, ಪೂಜಾ ಕುಣಿತ, ತಮಟೆ ವಾದ್ಯ, ವೀರಭದ್ರ ಕುಣಿತ, ಗೊರವರ ಕುಣಿತ, ಚಂಮೇಳ,150ಕ್ಕೂ ಹೆಚ್ಚು ಕಲಾವಿದರಾದ ಭಾಗವಹಿಸಿದ್ದರು.