ಸಾರಾಂಶ
ಕೊಪ್ಪಳ:
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಬಡ ಹಾಗೂ ಹಿಂದುಳಿದ ವರ್ಗಗಳ ಜನರ ಏಳಿಗೆಗಾಗಿ ಶ್ರಮಿಸಿ ಅವರ ಉದ್ಧಾರಕ್ಕೆ ಜನಪರ ಯೋಜನೆ ಜಾರಿಗೊಳಿಸಿದ್ದರು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು 110ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅರಸು ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಜನಿಸಿ ರಾಜಕೀಯದಲ್ಲಿ ಬಹು ಎತ್ತರಕ್ಕೆ ಬೆಳೆಯುವ ಜತೆಗೆ ರಾಜ್ಯದ ದೀರ್ಘಕಾಲದ ಮುಖ್ಯಮಂತ್ರಿಯಾಗಿ ಜನಪರ ಯೋಜನೆ ಜಾರಿಗೆ ತಂದ್ದಿದರು. ಅವರು ತಮ್ಮ ಅವಧಿಯಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಮರುನಾಮಕರಣ ಮಾಡಿರುವುದು ಮತ್ತೊಂದು ವಿಶೇಷವಾಗಿದೆ. ಇಂದು ಅವರನ್ನು ಸ್ಮರಿಸುವ ಜತೆಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದು ಕರೆ ನೀಡಿದರು.ಅಧ್ಯಕ್ಷೆತೆ ವಹಿಸಿದ್ದ ಸಹಾಯಕ ಆಯುಕ್ತ ಕ್ಯಾ. ಮಹೇಶ್ ಮಾಲಗಿತ್ತಿ, ಅಂದು ಕೆಲವರಿಗೆ 400ರಿಂದ 500 ಎಕರೆ ಜಮೀನಿದ್ದರೆ ಇನ್ನೂ ಕೆಲವರಿಗೆ ಜಮೀನು ಇರಲಿಲ್ಲ. ಹೀಗಾಗಿ ಎಲ್ಲರಿಗೂ ಭೂಮಿ ಸಮಾನವಾಗಿ ಹಂಚಿಕೆಯಾಗಬೇಕು ಎನ್ನುವ ಉದ್ದೇಶದಿಂದ ಅರಸು ಅವರು ಉಳುವವನೆ ಭೂಮಿಯ ಒಡೆಯ ಕಾನೂನು ಜಾರಿಗೆ ತಂದ ಧೀಮಂತ ನಾಯಕರಾಗಿದ್ದಾರೆ. ಈ ಕಾನೂನಿನಿಂದ ಜೀತ ಪದ್ಧತಿಯ ನಿರ್ಮೂಲನೆಗೂ ಸಹಾಯಕವಾಯಿತು ಎಂದು ತಿಳಿಸಿದರು.
ಉಪನ್ಯಾಸಕ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಅರಸು ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನಾಗಮಣಿ ಹೊಸಮನಿ ಮಾತನಾಡಿದರು. ಅರಸು ಜನ್ಮ ದಿನಾಚರಣೆ ನಿಮಿತ್ತ ವಸತಿ ನಿಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ಶಾಲೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಯಶವಂತಕುಮಾರ, ತಹಸೀಲ್ದಾರ್ ವಿಠ್ಹಲ್ ಚೌಗಲಾ, ಪ್ರಾಂಶುಪಾಲರಾದ ಮಂಜುನಾಥ, ಸಿದ್ದಲಿಂಗಪ್ಪ, ಚನ್ನಪ್ಪ ಹಂಚಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನಾಗರತ್ನ. ತಾಪಂ ಇಒ ದುಂಡಪ್ಪ ತುರಾದಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಮೇಲ್ವಿಚಾರಕರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.