ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಹೆಚ್ಚು. ತಾಯಿ ಕೊಟ್ಟಂತ ತುತ್ತು ಅಮೃತಕ್ಕೆ ಸಮಾನ ಎಂದು ಮುದ್ದೇಬಿಹಾಳ ತಾಲೂಕು ರಾಷ್ಟ್ರ ಸೇವಾ ಸಮಿತಿಯ ಪ್ರಬಂಧಕಿ ಸರಸ್ವತಿ ಮಡಿವಾಳರ ಹೇಳಿದರು.ಪಟ್ಟಣದ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಮಾತೃ ಭೋಜನ (ಕೈ ತುತ್ತಿನ ಊಟ), ಮಾತೃಭಾರತಿ ಹಾಗೂ ಪಾಲಕರ ಚಿಂತನಕೂಟದಲ್ಲಿ ಮಾತನಾಡಿದ ಅವರು, ಕೈ ತುತ್ತು ಎನ್ನುವುದು ತಾಯಿ ಮತ್ತು ಮಗುವಿನ ನಡುವೆ ನಡೆಯುವ ಒಂದು ಸಂಭಾಷಣೆಯಾಗಿದೆ. ತಾಯಿ ಆಕಾಂಕ್ಷೆ ಎನೆಂದರೆ ತನ್ನ ಮಗು ಊಟ ಮಾಡಬೇಕು ಎನ್ನುವ ಒಂದು ಉದ್ದೇಶದಿಂದ ಕೈ ತುತ್ತನ್ನು ನೀಡಲು ಪ್ರಾರಂಭಿಸತ್ತಾಳೆ. ಹಠ ಹಿಡಿದ ಮಗುವಿಗೆ ಬಾನಲ್ಲಿರುವ ಚಂದಿರನನ್ನು ತೋರಿಸಿ ಕಥೆ ಹೇಳಿಸಿ ಊಟ ಮಾಡಿಸುತ್ತಾಳೆ. ತಾಯಿ ಸಹನಾ ಮೂರ್ತಿ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂಗಮೇಶ್ವರ ವಿದ್ಯಾವರ್ದಕ ಸಂಘದ ಗೌರವ ಕಾರ್ಯದರ್ಶಿ ಎಸ್.ಬಿ.ಪತಂಗಿ ಅಧ್ಯಕ್ಷೀಯ ಭಾಷಣ ಮಾಡಿ, ಮನೆಯೇ ಮೊದಲ ಪಾಠ ಶಾಲೆ. ತಾಯಿ ಮೊದಲು ಗುರು ಎಂಬಂತೆ ತಾವು ಈ ಕಾರ್ಯಕ್ರಮಕ್ಕೆ ಆಗಮಿಸಿ ಕೈ ತುತ್ತಿನ ಊಟಕ್ಕೆ ಸಾಕ್ಷಿ ಕರಿಸಿದ್ದೀರಿ. ನಮ್ಮ ಮಕ್ಕಳನ್ನು ನಾವು ಹೇಗೆ ಬೆಳೆಸಬೇಕು, ಶಾರೀರಿಕವಾಗಿ, ಬೌದ್ಧಿಕವಾಗಿ ಮಗು ಬೆಳೆಯಬೇಕಾದರೆ ನಾವೆಲ್ಲ ಏನೂ ಮಾಡಬೇಕು ಎಂಬ ಕಾರಣಕ್ಕೆ ತಾವೆಲ್ಲ ಪಾಲಕರ ಚಿಂತನಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದೀರಿ. ತಮಗೆ ಅಭಿನಂದನೆಗಳು ಎಂದರು.ಇಂದು ಮಗುವಿಗೆ ಶಿಕ್ಷಣ ಬಹಳ ಮಹತ್ವದ್ದಾಗಿದೆ. ಮಗುವಿನ ಭವಿಷ್ಯ ಉಜ್ವಲವಾಗಬೇಕಾದರೆ ಎಲ್ಲರೂ ಪ್ರಯತ್ನ ಮಾಡಬೇಕು. ಮಕ್ಕಳನ್ನು ಶಕ್ತರನ್ನಾಗಿ ಮಾಡಬೇಕಾದರೆ ಬಹಳಷ್ಟು ಪಾಲಕರು ಕಾಳಜಿ ವಹಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಯಲ್ಲಪ್ಪ ಶಿರೋಳ ಮಾತನಾಡಿದರು. ಮಾತೃ ಭೋಜನ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಮಾತೆಯರು ಸ್ವತಃ ಭೋಜನ ತಯಾರಿಸಿ ತಮ್ಮ ಮಕ್ಕಳೊಂದಿಗೆ ಬೇರೆ ಮಕ್ಕಳನ್ನು ಸೇರಿಸಿಕೊಂಡು ಕೈ ತುತ್ತಿನಿಂದ ಊಟ ಮಾಡಿಸಿದರು. ಮಾತೆಯರಿಗಾಗಿ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕ್ರೀಡೆ ಹಾಗೂ ರಸಪ್ರಶ್ನೆಗಳಲ್ಲಿ ವಿಜೇತರಾದ ಮಾತೆಯರಿಗೆ ಹಾಗೂ ಮಕ್ಕಳಿಗೆ ಬಹುಮಾನ,ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಯು.ಗಿಡ್ಡಪ್ಪಗೋಳ ವಹಿಸಿದ್ದರು. ಅತಿಥಿಗಳಾಗಿ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಸ್.ಬಿ.ಪತಂಗಿ, ನಿರ್ದೇಶಕರಾದ ಸಿ.ಎಸ್.ಗಿಡ್ಡಪ್ಪಗೋಳ, ಟಿ.ಟಿ.ಹಗೇದಾಳ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಆರ್.ಕೆ.ಉಮರಾಣಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೈ.ಜಿ.ಶಿರೋಳ ಉಪಸ್ಥಿತರಿದ್ದರು. ಶಿಕ್ಷಕಿ ಅಶ್ವಿನಿ ಗಣಿ ಪ್ರಾರ್ಥಿಸಿದರು. ನಾಗರತ್ನಾ ಉಳ್ಳಾಗಡ್ಡಿ ಶ್ಲೋಕ ಹೇಳಿದರು. ಶ್ರವಂತಿ ಭಜಂತ್ರಿ ಅಮೃತ ವಚನ ಪಠಣ ಮಾಡಿದರು. ಮು.ಗು ಗಿರೀಶ ಕುಲಕರ್ಣಿ ಸ್ವಾಗತಿಸಿದರು. ಶಿಕ್ಷಕಿ ಪ್ರಿಯಾ ಕಾಖಂಡಕಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ನಿರೂಪಿಸಿದರು. ಶಿಕ್ಷಕಿ ಶ್ರುತಿ ಬೀಳಗಿ ವಂದಿಸಿದರು.