ಕಲಿತ ಶಾಲೆ ಹುಟ್ಟಿದ ಊರು ಅನ್ನ ಹಾಕುವ ರೈತರನ್ನು ಎಂದಿಗೂ ಮರೆಯಬಾರದು. ತಮ್ಮ ಪಾಠ ಪ್ರವಚನದ ಜೊತೆಗೆ ಆಟೋ ಪಾಠಗಳೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಸೇವೆ ಸಲ್ಲಿಸಿ ಜಗತ್ತಿಗೆ ಪರಿಚಯಿಸಿದ ಸಾಧಕರಲ್ಲಿ ವಿದ್ಯೆ ಎಂಬ ಜ್ಞಾನ ದೀವಿಗೆ ಮಹತ್ವವಾದುದ್ದು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಅಭಿಪ್ರಾಯಪಟ್ಟರು.ತಾಲೂಕಿನ ವಳಗೆರೆಹಳ್ಳಿಯ ಪ್ರಮೀಳಾ ವೀರಪ್ಪ ಪ್ರೌಢಶಾಲೆ ಹಾಗೂ ಕೆಂಪಮ್ಮ ಈರೇಗೌಡ ಹಿರಿಯ ಪ್ರಾಥಮಿಕ ಪಾಠಶಾಲೆ ಆಯೋಜಿಸಿದ್ದ ಸಂಸ್ಥಾಪಕ ವಿ.ಕೆ.ವೀರಪ್ಪ ಅವರ 97 ವರ್ಷದ ಜನ್ಮದಿನೋತ್ಸವ ಹಾಗೂ 38ನೇ ಶಾಲಾ ವಾರ್ಷಿಕೋತ್ಸವ 10 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಜನ್ಮ ನೀಡಿದ ತಂದೆ ತಾಯಿಗಳು ವಿದ್ಯೆ ಬುದ್ಧಿ ಕಲಿಸಿದ ಗುರು ಹಿರಿಯರಿಗೆ ಗೌರವ ಸಲ್ಲಿಸಬೇಕು. ಕಲಿತ ಶಾಲೆ ಹುಟ್ಟಿದ ಊರು ಅನ್ನ ಹಾಕುವ ರೈತರನ್ನು ಎಂದಿಗೂ ಮರೆಯಬಾರದು. ತಮ್ಮ ಪಾಠ ಪ್ರವಚನದ ಜೊತೆಗೆ ಆಟೋ ಪಾಠಗಳೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸೇವಾ ಮನೋಭಾವ ರೂಢಿಸಿಕೊಳ್ಳುವಂತೆ ಕರೆ ನೀಡಿದರು.
ಶಿಸ್ತು, ಸಮಯಪಾಲನೆ, ಪೌಷ್ಟಿಕ ಆಹಾರ ಸೇವನೆ ಮೂಲಕ ಆರೋಗ್ಯ ವೃದ್ಧಿಪಡಿಸಿಕೊಳ್ಳಬೇಕು. ಪ್ರಸ್ತುತ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ವ್ಯಾಪಾರಿಕರಣಗೊಳ್ಳುತ್ತಿರುವುದು ವಿಪರ್ಯಾಸ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ಮಾಡಿಸಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಮುಂದಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಮುಖ್ಯಸ್ಥ ಬಿ.ವಿ.ಸತೀಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶ ಮತ್ತು ಮಹಾದಾಸೆಯಿಂದ ವಿ.ಕೆ.ವೀರಪ್ಪನವರು ಶಿಕ್ಷಣ ಸಂಸ್ಥೆ ಪ್ರಾರಂಭಿಸಿದರು. ಉಚಿತ ಶಿಕ್ಷಣ ಸೇರಿದಂತೆ ವಿವಿಧ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಕ್ರೀಡೆಗಳಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ರಾಜೀವ್, ಉದ್ಯಮಿ ಕೊತ್ತನಹಳ್ಳಿ ಶಂಕರ್, ಹುಡ್ಕೊ ಸಂಸ್ಥೆ ಸಿ.ಎಂ.ಉಮೇಶ್, ಅಂಜಲಿ ಸತೀಶ್, ನಿವೃತ್ತ ಶಿಕ್ಷಕರಾದ ಎನ್.ಶಿವಣ್ಣ, ನಂಜುಂಡೇಗೌಡ, ಪುಟ್ಟಲಿಂಗಯ್ಯ, ವಿ.ಕೆ.ರಾಧ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.