ಸಾರಾಂಶ
ಪ್ರತಿಯೊಬ್ಬರೂ ತಮ್ಮ ಬಾಲ್ಯದ ದಿನಗಳನ್ನು ಮರೆಯಬಾರದು. ತಮ್ಮ ಏಳಿಗೆಗೆ ಮೂಲ ಕಾರಣವಾಗಿರುವ ಶಾಲೆಗಳತ್ತ ಗಮನಹರಿಸಬೇಕಿದೆ.
ವಿಜಯಪುರ: ಸಮೀಪ ಚನ್ನರಾಯಪಟ್ಟಣದ ಮಹಾತ್ಮಾಗಾಂಧಿ ಪ್ರೌಢಶಾಲೆಯ ಆವರಣದಲ್ಲಿ ೨೦೦೩- ೦೪ನೇ ಸಾಲಿನ ಹಳೇ ವಿದ್ಯಾರ್ಥಿಗಳು, ಚನ್ನರಾಯಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಯೋಗದಲ್ಲಿ, ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದರು.
ಲಯನ್ಸ್ ಕ್ಲಬ್ ಬೆಂಗಳೂರು, ಯಲಚೇನಹಳ್ಳಿ, ಎಂ.ಎಸ್.ರಾಮಯ್ಯ ದಂತ ವೈದ್ಯಕೀಯ ಕಾಲೇಜು, ಭಾರತೀಯ ರೆಡ್ ಕ್ರಾಸ್ ರಕ್ತನಿಧಿ, ಮಹಾತ್ಮಗಾಂಧಿ ಪ್ರೌಢಶಾಲೆಗಳ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಕಂಪ್ಯೂಟರ್ ಮೂಲಕ ಕಣ್ಣಿನ ತಪಾಸಣೆ, ಕನ್ನಡಕಗಳ ವಿತರಣೆ, ಉಚಿತವಾಗಿ ಹೃದಯ ತಪಾಸಣೆ, ಇ.ಸಿ.ಜಿ, ಮಹಿಳೆಯರಿಗೆ ಗರ್ಭಕೋಶದ ಸಮಸ್ಯೆಗಳಿಗೆ ಉಚಿತ ಪರೀಕ್ಷೆ ಮತ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಪರೀಕ್ಷೆ, ಮಧುಮೇಹ, ರಕ್ತದೊತ್ತಡ, ದಂತ ಪರೀಕ್ಷೆ, ಮೂಳೆರೋಗ, ಕಿವಿ, ಗಂಟಲು, ಮೂಗು ಪರೀಕ್ಷೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಸಾಮಾನ್ಯ ಆರೋಗ್ಯ ತಪಾಸಣೆ, ಔಷಧಿಗಳ ವಿತರಣೆ, ಹೃದಯ ವೈಫಲ್ಯತೆ ಪರೀಕ್ಷೆ, ಫೈಲ್ಸ್, ಹರ್ನಿಯಾ, ಅಪೆಂಡಿಸೈಟಿಸ್, ಪಿತ್ತಕೋಶದಲ್ಲಿ ಕಲ್ಲು ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಉಚಿತ ತಪಾಸಣೆ ಮಾಡಿ, ವೈದ್ಯರು ಚಿಕಿತ್ಸೆ ನೀಡಿದರು.ಹಳೇ ವಿದ್ಯಾರ್ಥಿ, ವಕೀಲ ಸಿ.ಎನ್.ಮಧು ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಬಾಲ್ಯದ ದಿನಗಳನ್ನು ಮರೆಯಬಾರದು. ತಮ್ಮ ಏಳಿಗೆಗೆ ಮೂಲ ಕಾರಣವಾಗಿರುವ ಶಾಲೆಗಳತ್ತ ಗಮನಹರಿಸಬೇಕಿದೆ. ತಂದೆ, ತಾಯಿ, ನಮ್ಮ ಪೋಷಣೆ ಮಾಡಿ, ದೊಡ್ಡವರನ್ನಾಗಿ ಮಾಡುತ್ತಾರೆ. ಆದರೆ, ಶಾಲೆಗಳು ಮತ್ತು ಶಿಕ್ಷಕರು ನಮ್ಮ ಭವಿಷ್ಯಕ್ಕೆ ಅಗತ್ಯವಾಗಿರುವ ಜ್ಞಾನವನ್ನು ನಮಗೆ ತುಂಬಿಸುತ್ತಾರೆ. ಆದ್ದರಿಂದ ನಮ್ಮ ಕೈಯಲ್ಲಾದ ಮಟ್ಟಿಗೆ ಶಾಲೆಗಳ ಅಭಿವೃದ್ಧಿಗಾಗಿ, ನಮ್ಮನ್ನು ಬೆಳೆಸುತ್ತಿರುವ ಸಮಾಜಕ್ಕೆ ಒಳಿತು ಮಾಡುವ ಕಾರ್ಯವಾಗಬೇಕು ಎಂದರು.
ಲಯನ್ ಬಾಲಾಜಿ ಸಿಂಗ್, ಶ್ವೇತಾ, ಪಿ.ಜಿ.ವೆಂಕಟೇಶ್, ಲಯನ್ ರಾಘವೇಂದ್ರ, ನಾಗರಾಜ್.ಪಿ.ಕೆ, ಲಯನ್ ಅಮಿತ್ ಸಾಮಂತ್, ವಸಂತ್ ಕುಮಾರ್.ಸಿ.ಆರ್, ಮುಖ್ಯಶಿಕ್ಷಕ ಗುರುಮುದ್ದಪ್ಪ, ಶಿಕ್ಷಕ ನಾರಾಯಣಸ್ವಾಮಿ ಮುಂತಾದವರು ಹಾಜರಿದ್ದರು.