ಸಾರಾಂಶ
ಕಬ್ಬಿನ ಗದ್ದೆಗೆ ನೀರು ಹಾಯಿಸಲು ಹೋಗಿದ್ದ ರೈತನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ ಆತಗೂರು ಹೋಬಳಿ ತೂಬಿನಕೆರೆ ಗ್ರಾಮದಲ್ಲಿ ಜರುಗಿದೆ. ಗ್ರಾಮದ ರಾಜಪ್ಪ ಪುತ್ರ ರಾಮು ಚಿರತೆ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಕಬ್ಬಿನ ಗದ್ದೆಗೆ ನೀರು ಹಾಯಿಸಲು ಹೋಗಿದ್ದ ರೈತನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ ಆತಗೂರು ಹೋಬಳಿ ತೂಬಿನಕೆರೆ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಜರುಗಿದೆ.ಗ್ರಾಮದ ರಾಜಪ್ಪ ಪುತ್ರ ರಾಮು(31) ಚಿರತೆ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ರೈತ ರಾಮು ಗ್ರಾಮದ ಹೊರವಲಯದಲ್ಲಿ ತಮ್ಮ ಕಬ್ಬಿನ ಗದ್ದೆಗೆ ನೀರು ಹಾಯಿಸಲು ಹೋಗಿದ್ದಾರೆ. ಈ ವೇಳೆ ಗದ್ದೆಯಲ್ಲಿ ಅಡಗಿದ್ದ ಚಿರತೆ ಏಕಾಏಕಿ ರಾಮು ಮೇಲೆದಾಳಿ ನಡೆಸಿ ಉಗುರುಗಳಿಂದ ಪರಚಿ ಗಾಯಗೊಳಿಸಿದೆ. ಈತ ರಕ್ಷಣೆಗಾಗಿ ಕೂಗಿಕೊಂಡಾಗ ಚಿರತೆ ಸ್ಥಳದಿಂದ ಪರಾರಿಯಾಗಿದೆ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯ ಅಧಿಕಾರಿ ಗವಿಯಪ್ಪ ಹಾಗೂ ಸಿಬ್ಬಂದಿ ಗಾಯಾಳುವನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ದೊರಕಿಸಿ ಕೊಟ್ಟಿದ್ದಾರೆ. ತೂಬಿನಕೆರೆ ಮತ್ತು ಸುತ್ತಮುತ್ತಲ ಗ್ರಾಮಗಳ ನಿರ್ಜನ ಪ್ರದೇಶಗಳಲ್ಲಿ ರಾತ್ರಿ ಮತ್ತು ಮುಂಜಾನೆ ಚಿರತೆ ಹಾವಳಿ ಹೆಚ್ಚಾಗಿ ಆತಂಕ ಮೂಡಿಸಿದೆ. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನ್ ಇರಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಪಡಿಸಿದ್ದಾರೆ.