ಗ್ರಾಮದೊಳಗೆ ಬಂದು ಎಮ್ಮೆ ಕರು ಬಲಿ ಪಡೆದ ಚಿರತೆ

| Published : May 23 2024, 01:06 AM IST

ಸಾರಾಂಶ

ತಾಲೂಕಿನ ಹಬುಕನಹಳ್ಳಿ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಕಳೆದ ಒಂದೆರೆಡು ತಿಂಗಳಿನಿಂದ ಚಿರತೆಯ ಹಾವಳಿ ಹೆಚ್ಚಾಗಿದ್ದು, ಜನರು ಓಡಾಡಲು ಭಯಪಡುವಂತಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಹಬುಕನಹಳ್ಳಿ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಕಳೆದ ಒಂದೆರೆಡು ತಿಂಗಳಿನಿಂದ ಚಿರತೆಯ ಹಾವಳಿ ಹೆಚ್ಚಾಗಿದ್ದು, ಜನರು ಓಡಾಡಲು ಭಯಪಡುವಂತಾಗಿದೆ. ಕಳೆದ ಒಂದೆರೆಡು ದಿನಗಳ ಹಿಂದೆ ಹಬುಕನಹಳ್ಳಿ ಬಸವೇಶ್ವರ ನಗರದ ಪ್ರಕಾಶ್ ಎಂಬುವವರಿಗೆ ಸೇರಿದ ಮನೆ ಮುಂದೆ ಕಟ್ಟಿದ್ದ ಎಮ್ಮೆಯ ಕರುವನ್ನು ಚಿರತೆ ರಾತ್ರಿ ವೇಳೆ ಗ್ರಾಮದೊಳಗೇ ಬಂದು ತಿಂದು ಹಾಕಿದೆ. ಕಳೆದ ಒಂದು ತಿಂಗಳ ಹಿಂದೆಯೂ ಸಹ ಚಿರತೆ ಗ್ರಾಮದೊಳಗೆ ಬಂದು ನಾಯಿ, ಮೇಕೆಯನ್ನು ತಿಂದು ಹಾಕಿದೆ. ಕತ್ತಲು ಆಗುತ್ತಿದ್ದಂತೆ ರೈತರು ತಮ್ಮ ಜಮೀನಿನ ಕಡೆ ಓಡಾಡುವುದನ್ನೇ ಬಿಟ್ಟಿದ್ದಾರೆ. ಐದಾರು ಚಿರತೆಗಳು ಈ ಪ್ರದೇಶಗಳಲ್ಲಿ ಓಡಾಡುತ್ತಿವೆ. ಈ ಕುರಿತು ಅರಣ್ಯ ಇಲಾಖೆಯ ಗಮನಕ್ಕೆ ತಂದರೆ ಚಿರತೆಯ ಫೋಟೋ, ವಿಡಿಯೋ ಮಾಡಿ ಕಳಿಸಿ ಎಂದು ಬೇಜವಾಬ್ದಾರಿತನದಿಂದ ಉತ್ತರಿಸುತ್ತಾರೆ. ಚಿರತೆ ಬರುವುದೇ ರಾತ್ರಿ ವೇಳೆ ಯಾರು ತಾನೇ ಆಗ ವಿಡಿಯೋ ಮಾಡಲು ಸಾಧ್ಯವಾಗುತ್ತದೆ. ಈ ಕನಿಷ್ಠ ಜ್ಞಾನವೂ ಅರಣ್ಯ ಇಲಾಖೆಯವರಿಗೆ ಇಲ್ಲವಲ್ಲ ಎಂದು ಗ್ರಾಮದ ಯುವಕ ಜೀವನ್ ತಿಳಿಸಿದರು.

ಚಿರತೆ ಹೆಜ್ಜೆ ಗುರುತು ಪತ್ತೆ: ಕಳೆದ ಮೂರ್‍ನಾಲ್ಕು ದಿನಗಳಿಂದ ತಮ್ಮ ಗ್ರಾಮದೊಳಗೆ ಚಿರತೆ ಓಡಾಡುತ್ತಿದೆ. ಮಳೆ ಬಂದಿರುವುದರಿಂದ ಮಣ್ಣು ತೇವವಾಗಿದ್ದು, ಚಿರತೆಯ ಕಾಲಿನ ಗುರುತುಗಳು ಕಾಣುತ್ತಿವೆ. ಚಿರತೆ ಮನುಷ್ಯರ ಭೇಟೆಯಾಡುವ ಮುನ್ನ ಅರಣ್ಯ ಇಲಾಖೆಯವರು ಎಚ್ಚೆತ್ತು ಬೋನ್‌ ಇಟ್ಟು ಚಿರತೆಯನ್ನು ಹಿಡಿಯಬೇಕೆಂದು ಸಾರ್ವಜನಿಕರು, ಜೀವನ್ ಆಗ್ರಹಿಸಿದ್ದಾರೆ.