ಸಾರಾಂಶ
ತಲೆನೋವಾಗಿದ್ದ ಚಿರತೆ ಬೋನಿಗೆ ಬಿದ್ದಿದ್ದರಿಂದ ಗ್ರಾಮಸ್ಥರು ನಿರಾತಂಕಪಡುತ್ತಿದ್ದರೆ, ಹಲವಾರು ಯುವಕರು ಬೋನಿನೊಳಗಿದ್ದ ಚಿರತೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹರಸಾಹಸ ಪಡುತ್ತಿದ್ದ ದೃಶ್ಯ ತಾಲೂಕಿನ ದೊಂಬರನಹಳ್ಳಿಯಲ್ಲಿ ಕಂಡುಬಂತು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಲೆನೋವಾಗಿದ್ದ ಚಿರತೆ ಬೋನಿಗೆ ಬಿದ್ದಿದ್ದರಿಂದ ಗ್ರಾಮಸ್ಥರು ನಿರಾತಂಕಪಡುತ್ತಿದ್ದರೆ, ಹಲವಾರು ಯುವಕರು ಬೋನಿನೊಳಗಿದ್ದ ಚಿರತೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹರಸಾಹಸ ಪಡುತ್ತಿದ್ದ ದೃಶ್ಯ ತಾಲೂಕಿನ ದೊಂಬರನಹಳ್ಳಿಯಲ್ಲಿ ಕಂಡುಬಂತು.ದೊಂಬರನಹಳ್ಳಿ ಗ್ರಾಮಸ್ಥರಿಗೆ ಚಿರತೆಯೊಂದು ಕಳೆದ ಐದಾರು ತಿಂಗಳಿನಿಂದ ಕಾಟ ಕೊಟ್ಟಿತ್ತು. ಮನೆಯ ಸಾಕು ಪ್ರಾಣಿಗಳು ಚಿರತೆಯ ಪಾಲಾಗಿತ್ತು. ದೊಂಬರನಹಳ್ಳಿ ಸುತ್ತಮುತ್ತಲ ಗ್ರಾಮಗಳಾದ ದೊಂಬರನಹಳ್ಳಿ ಗೊಲ್ಲರಹಟ್ಟಿ, ತೋವಿನಕೆರೆ, ಅಕ್ಕಳಸಂದ್ರ ಗೊಲ್ಲರಹಟ್ಟಿ, ಚಿಮ್ಮನಹಳ್ಳಿ, ಕುರುಬರಹಳ್ಳಿ, ಶೆಟ್ಟಿಹಳ್ಳಿ, ಹಾಲ್ದೇವರ ಹಟ್ಟಿ, ಹರಿಕಾರನಹಳ್ಳಿ ಸೇರಿ ಹಲವು ಗ್ರಾಮಗಳ ಜನರು ಬೆಳಗ್ಗೆ ಮತ್ತು ಸಾಯಂಕಾಲದ ವೇಳೆ ಓಡಾಡಲು ಭಯಪಡುವಂತಾಗಿತ್ತು. ಶಾಲೆಗೆ ಹೋಗುವ ಮಕ್ಕಳ ಬಗ್ಗೆ ಪೋಷಕರು ಭಯಭೀತರಾಗಿದ್ದರು.
ಇದರಿಂದ ರೋಸಿ ಹೋಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ಮೊರೆ ಹೋಗಿದ್ದರು. ಚಿಕ್ಕನಾಯಕನಹಳ್ಳಿ ಪ್ರಾದೇಶಿಕ ಅರಣ್ಯ ಇಲಾಖಾ ಸಿಬ್ಬಂದಿ ಭಾನುವಾರವಷ್ಟೆ ಚಿರತೆ ಸೆರೆ ಹಿಡಿಯಲು ಬೋನನ್ನು ತಂದಿರಿಸಿದ್ದರು. ಮಂಗಳವಾರ ಬೆಳಗ್ಗೆ ಸುಮಾರು ಮೂರರಿಂದ ನಾಲ್ಕು ವರ್ಷ ವಯಸ್ಸಿನ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ.ಚಿರತೆಯನ್ನು ಒಂದು ದಿನ ವೀಕ್ಷಣೆಯಲ್ಲಿ ಇಟ್ಟು, ಆರೋಗ್ಯ ಪರಿಶೀಲನೆ ಮಾಡಿದ ನಂತರ ಮೇಲಾಧಿಕಾರಿಗಳ ಅನುಮತಿ ಪಡೆದು ಭದ್ರಾ ಅಭಯಾರಣ್ಯಕ್ಕೆ ಬಿಡಲಾಗುವುದೆಂದು ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಟಿ.ಬಿ.ಮಂಜುನಾಥ್, ಸಿಬ್ಬಂದಿಗಳಾದ ಉಗ್ರಪ್ಪ, ಮಂಜುನಾಥ್, ರೂಪೇಶ್ ಉಪಸ್ಥಿತರಿದ್ದರು.