ನಾಯಿಯನ್ನು ಬೇಟೆಯಾಡಿದ ಚಿರತೆ

| Published : Aug 27 2025, 01:00 AM IST

ಸಾರಾಂಶ

ಪಟ್ಟಣದ ಜನರಲ್‌ ಆಸ್ಪತ್ರೆ ಎದುರಿನ ಲೇಔಟ್ ನಲ್ಲಿ ಚಿರತೆ ನಾಯಿಯನ್ನು ಬೇಟೆಯಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಜನರಲ್‌ ಆಸ್ಪತ್ರೆ ಎದುರಿನ ಲೇಔಟ್ ನಲ್ಲಿ ಚಿರತೆ ನಾಯಿಯನ್ನು ಬೇಟೆಯಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಗುಂಡ್ಲುಪೇಟೆ-ಸುಲ್ತಾನ್‌ ಬತ್ತೇರಿ ಹೆದ್ದಾರಿ ಸಾರ್ವಜನಿಕ ಆಸ್ಪತ್ರೆ ಎದುರಿನ ಲೇ ಔಟ್‌ನಲ್ಲಿ ಸೋಮವಾರ ರಾತ್ರಿ ೮.೩೦ ರ ಸಮಯದಲ್ಲಿ ಚಿರತೆ ಮಹಿಳೆಯೊಬ್ಬರಿಗೆ ಕಾಣಿಸಿಕೊಂಡಿದೆ. ಜೊತೆಗೆ ಎದುರು ಮನೆಯಲ್ಲಿ ಹಾಕಲಾದ ಸಿಸಿ ಕ್ಯಾಮೆರಾದಲ್ಲಿ ಓಡಾಡುವ ದೃಶ್ಯ ಸೆರೆಯಾಗಿದೆ. ಚಿರತೆ ಪಟ್ಟಣದ ಜನರಲ್‌ ಆಸ್ಪತ್ರೆ ಎದುರು ಕಾಣಿಸಿಕೊಂಡಿದೆ ಎಂಬ ವಿಚಾರ ತಿಳಿದ ಸಾರ್ವಜನಿಕರು ಜಮಾಯಿಸಿ ಕೂಗಾಟ ಹೆಚ್ಚಾಗಿದೆ ಆ ಸಮಯದಲ್ಲಿ ಚಿರತೆ ಜೊತೆ ಚಿರತೆ ಮರಿ ಕೂಡ ಓಡಿ ಹೋಯಿತು ಎಂದು ಪ್ರತ್ಯೇಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ವಿಷಯ ತಿಳಿದು ಎಸಿಎಫ್‌ ಕೆ.ಸುರೇಶ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸಿಬ್ಬಂದಿಗಳು ಹುಡುಕಾಟ ನಡೆಸುವ ವೇಳೆಗೆ ಚಿರತೆ ಮತ್ತು ಚಿರತೆ ಮರಿ ಪರಾರಿಯಾಗಿವೆ ಎನ್ನಲಾಗಿದೆ. ಲೇಔಟ್‌ ಸುತ್ತ ಗಿಡ ಗಂಟಿಗಳು ಬೆಳೆದು ನಿಂತಿವೆ. ಅಲ್ಲದೆ ಮಹದೇವಪ್ರಸಾದ್‌ ನಗರದ ಸುತ್ತ ಮುತ್ತ ಬೀದಿ ನಾಯಿಗಳ ಹಾವಳಿ ಇದೆ. ನಾಯಿ ಬೇಟೆಗೆ ಚಿರತೆ ಬಂದಿರುವ ಸಾಧ್ಯತೆ ಹೆಚ್ಚಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಜನರಲ್‌ ಆಸ್ಪತ್ರೆ ಎದುರು ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಭಯಬೀತರಾಗಿದ್ದಾರೆ. ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಚಿರತೆ ಬೋನು ಇಡಬೇಕು. ಗಿಡ ಗಂಟಿಗಳ ತೆರವುಗೊಳಿಸಬೇಕು. ಬೀದಿ ನಾಯಿಗಳ ಹಿಡಿಯಬೇಕು ಎಂದು ಕಾವಲು ಪಡೆ ಅಬ್ದುಲ್‌ ಮಾಲೀಕ್‌ ಆಗ್ರಹಿಸಿದ್ದಾರೆ.

ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯ ಹೆದ್ದಾರಿಯಲ್ಲಿ ಬೀದಿ ದೀಪಗಳು ಕೆಟ್ಟಿವೆ. ಕೂಡಲೇ ಬೀದಿ ದೀಪ ದುರಸ್ತಿ ಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.