ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಯುಗಾದಿ ಹಾಗೂ ರಂಜಾನ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶನಿವಾರ ರೌಡಿಶೀಟರ್‌ಗಳ ಪರೇಡ್ ನಡೆಯಿತು.ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ರೌಡಿಶೀಟರ್‌ಗಳ ಪರೇಡ್ ನಡೆಸಿ, ಮತ್ತೆ ಕಾನೂನು ಬಾಹಿರ ಕುಕೃತ್ಯಗಳಲ್ಲಿ ಪಾಲ್ಗೊಂಡರೆ ತಕ್ಕ ಪಾಠ ಕಲಿಸಲಾಗುವುದು. ಜೈಲಿಗಟ್ಟಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಳ್ಳತನ, ದರೋಡೆ, ಗಲಭೆ, ಕೊಲೆ, ಕೊಲೆ ಯತ್ನ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಂಡಿರುವವರ ಮಾಹಿತಿ ಕಲೆ ಹಾಕಲಾಯಿತು. ಹಳೆ ರೌಡಿಗಳ ಕಾಯಂ ವಿಳಾಸ, ಮೊಬೈಲ್ ಸಂಖ್ಯೆ, ಬೈಕ್ ಮಾಹಿತಿ, ಸ್ನೇಹಿತರ ಮಾಹಿತಿ, ಹಿಂದೆ ನಡೆಸಿದ ಕೃತ್ಯಗಳು, ಚಲನವಲನ, ರಾತ್ರಿ ವಾಸದ ಜಾಗ, ವೃತ್ತಿ ಸೇರಿದಂತೆ ಸಂಪೂರ್ಣ ಮಾಹಿತಿ ಕಲೆ ಹಾಕಲಾಯಿತು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಕಳೆದ 10 ವರ್ಷಗಳಿಂದ ಯಾವುದೇ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗದ 36 ಜನರನ್ನು ರೌಡಶೀಟರ್ ಪಟ್ಟಿಯಿಂದ ತೆಗೆಯುವಂತೆ ಪೊಲೀಸ್ ಅಧಿಕಾರಿಗಳಗೆ ಸೂಚನೆ ನೀಡಲಾಗಿದೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಸುಮಾರು 200 ಜನರಿಗೆ ಬುದ್ಧಿವಾದ ಹೇಳಲಾಗಿದೆ ಎಂದರು. ನೆಹರೂ ನಗರದ ಪಿಜಿಯಲ್ಲಿ ಯುವತಿ ಐಶ್ವರ್ಯಲಕ್ಷ್ಮೀ ಗಲಗಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಕರ ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದೆ ಎಂದರು.