ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್
ಆಧುನಿಕ ಯುಗ ಬೆಳೆದಂತೆ ಮದುವೆ ಎಂಬುದು ದುಬಾರಿ ಆಗುತ್ತಿದೆ. ಉಳ್ಳವರು ಮಾಡುವ ಅದ್ಧೂರಿತನದ ಮದುವೆಯಿಂದ ಕೆಲವರು ಪ್ರೇರೇಪಿತರಾಗಿ ಸಾಲಗಾರರಾಗುತ್ತಿದ್ದು, ಸರಳ ಹಾಗೂ ಸಾಮೂಹಿಕ ವಿವಾಹದಿಂದ ಬದುಕು ರೂಪಿಸಿಕೊಳ್ಳಬಹುದು ಎಂದು ನೊಣವಿನಕೆರೆ ಕಾಡು ಸಿದ್ಧೇಶ್ವರ ಮಠದ ಕರಿ ವೃಷಭೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.ತಾಲೂಕಿನ ಯಡಿಯೂರು ಹೋಬಳಿ ಕಗ್ಗೇರೆ ತಪೋ ಕ್ಷೇತ್ರದಲ್ಲಿ ಭಕ್ತರು ತಮ್ಮ ಹಿರಿಯರ ಸ್ಮರಣಾರ್ಥ ನಿರ್ಮಿಸಿದ್ದ ತಪೋ ಕ್ಷೇತ್ರ ಅರವಂಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮದುವೆಗಾಗಿ ಕೋಟಿಗಟ್ಟಲೆ ಖರ್ಚು ಮಾಡುವ ಕೆಟ್ಟ ಸಂಪ್ರದಾಯ ಉಳ್ಳವರಲ್ಲಿ ಹೆಚ್ಚಾಗುತ್ತಿದೆ, ಪುರಾತನ ಕಾಲದಲ್ಲಿ ಗಾಂಧರ್ವ ವಿವಾಹ ಎಂಬ ಹೆಸರಿನಲ್ಲಿ ಸರಳ ವಿವಾಹ ನಡೆದ ಹಲವಾರು ಸಾಕ್ಷಿಗಳು ನಮ್ಮಲ್ಲಿವೆ ಎಂದರು.ಮದುವೆಗಾಗಿ ಮಾಡುವ ಖರ್ಚಿನಿಂದ ಪೋಷಕರು ಸಾಲಗಾರರಾಗಿ ಕಷ್ಟ ಪಡುವುದು ಸಾಮಾನ್ಯ ವಿಚಾರವಾಗಿದೆ, ಸರಳ ವಿವಾಹಗಳನ್ನು ಮಾಡುವ ರೂಢಿ ಸಮಾಜದಲ್ಲಿ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು. ಇಂದಿನ ಕಾಲದಲ್ಲಿ ತಂದೆ- ತಾಯಿಯವರ ಹೆಸರನ್ನು ಹೇಳಲು ಇಚ್ಛಿಸದ ಹಲವಾರು ವ್ಯಕ್ತಿಗಳನ್ನು ನಾವು ಕಂಡಿದ್ದೇವೆ. ಆದರೆ ಈ ಕುಟುಂಬಗಳು ಹಿರಿಯರಿಗಾಗಿ, ತಂದೆ- ತಾಯಿಯವರ ಹೆಸರಿನಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದಕ್ಕೆ ಅಭಿನಂದಿಸಬೇಕಾಗಿದೆ ಎಂದರು.
ಎಡೆಯೂರಿನ ಬಾಳೆಹೊನ್ನೂರು ಕಾಸಾ ಶಾಖಾಮಠದ ಪೀಠಾಧ್ಯಕ್ಷ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮದ ಉಳಿವಿಗಾಗಿ ಕಾರ್ಯನಿರ್ವಹಿಸುವುದು ಶಿವಯೋಗಿಗಳು ಮಾತ್ರ. ಎಡೆಯೂರು ಸಿದ್ದಲಿಂಗೇಶ್ವರರು ಧರ್ಮ ಜಾಗೃತಿಗೊಳಿಸಿದ ಪುಣ್ಯಕ್ಷೇತ್ರವಾದ ತಪೋ ಕ್ಷೇತ್ರದಲ್ಲಿ ಮದುವೆ ಆಗುತ್ತಿರುವ ಎಲ್ಲಾ ಜೋಡಿಗಳು ಕೂಡ ಪುಣ್ಯವಂತರು ಎಂದರು,ನವದಂಪತಿಗಳ ಜೀವನ ಸುಖವಾಗಿರಬೇಕಾದರೆ ಅತ್ತೆ- ಮಾವಂದಿರನ್ನು ತಂದೆ- ತಾಯಿಯಂತೆ ಸೊಸೆಯನ್ನು ಮಗಳಂತೆ ಕಂಡಾಗ ಮಾತ್ರ ನಿಮ್ಮ ಬದುಕು ಸುಖಕರ ಆಗಿರುತ್ತದೆ ಎಂದು ಸಲಹೆ ನೀಡಿದರು,
ಇದೇ ಸಂದರ್ಭದಲ್ಲಿ ಅರವಂಟಿಕೆ ಭವನದಲ್ಲಿ ಸರಳ ವಿವಾಹವಾದ ನಾಲ್ಕು ಜೋಡಿಗಳಿಗೆ ಆಶೀರ್ವದಿಸಿದರು.ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ರಾಮೇನಹಳ್ಳಿ ಮಠದ ಶ್ರೀ ಶಿವ ಪಂಚಾಕ್ಷರಿ ಸ್ವಾಮೀಜಿ ಹಾಗೂ ದಾನಿಗಳಾದ ನಂದೀಶ್, ದಿನೇಶ್, ಉದಯ್, ವಿಜಯಮ್ಮ, ರೇವಣ್ಣ ,ಕುಮಾರ್ ಸೇರಿದಂತೆ ಇತರರು ಇದ್ದರು.