ಸಂವಿಧಾನದಿಂದಲೇ ಸ್ವಾಭಿಮಾನದ ಬದುಕು

| Published : Mar 25 2025, 12:50 AM IST

ಸಾರಾಂಶ

ಹೊಸಕೋಟೆ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನ ದೇಶದ ಪರಿಸ್ಥಿತಿ ನಿಭಾಯಿಸುವ ಜತಗೆ ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕುವ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಚಿಂತಕ ಪ್ರೊ.ಜಿ.ರಾಮಕೃಷ್ಣ ಹೇಳಿದರು.

ಹೊಸಕೋಟೆ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನ ದೇಶದ ಪರಿಸ್ಥಿತಿ ನಿಭಾಯಿಸುವ ಜತಗೆ ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕುವ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಚಿಂತಕ ಪ್ರೊ.ಜಿ.ರಾಮಕೃಷ್ಣ ಹೇಳಿದರು.

ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಪುರು ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಈರಣ್ಣ ಅವರು ರಚಿಸಿರುವ ‘ಭಾರತದ ಸಂವಿಧಾನದ ಮೌಲ್ಯಗಳು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸನತಾನ ಧರ್ಮ ಎಂಬುದು ಈ ದೇಶದ ಮೂಲ ಧರ್ಮ. ಅದಕ್ಕೆ ಮನುಸ್ಮೃತಿ ಶಕ್ತಿ ತುಂಬಿದೆ ಎಂದು ಕೆಲ ಅಜ್ಞಾನಿಗಳು ಇಂದಿಗೂ ವಾದಿಸುತ್ತಾರೆ. ಮನುಸ್ಮೃತಿ ಮನುಷ್ಯನನ್ನು ಮನುಷ್ಯನನ್ನಾಗಿ ನೋಡದೆ ಪ್ರಾಣಿಗಳನ್ನಾಗಿ ನೋಡುವ ಒಂದು ಕೃತಿ. ಅದರಲ್ಲಿ ಮನುಷ್ಯ ವಿರೋಧಿ ವಿಚಾರಗಳಿವೆ. ಅದಕ್ಕೆ ದೊಡ್ಡ ಪೆಟ್ಟು ಕೊಟ್ಟ ಏಕೈಕ ಗ್ರಂಥ ಸಂವಿಧಾನ. ಸಂವಿಧಾನವೇ ನಮ್ಮ ಹೆಮ್ಮೆ ಎಂದು ಹೇಳಿದರು.

ಸಂವಿಧಾನದ ಆಶಯ ಮತ್ತು ಅಂಬೇಡ್ಕರ್ ಚಿಂತನೆಗಳನ್ನು ಪ್ರತಿಯೊಬ್ಬರು ಗೌರವಿಸುವುದಲ್ಲದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗಲೇ ಅಂಬೇಡ್ಕರ್ ಜನ್ಮದಿನಾಚರಣೆಗೆ ಅರ್ಥ ಬರುತ್ತದೆ. ದೇಶದಲ್ಲಿ ಕೆಲವರು ಅಂಬೇಡ್ಕರ್ ಆಶಯ ಹೇಳುತ್ತಲೆ ಅವರ ಆಶಯಗಳಿಗೆ ವಿರುದ್ಧವಾದ ಸಮಾಜ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಅದರ ವಿರುದ್ಧ ಅಂಬೇಡ್ಕರ್ ವಾದಿಗಳೆಲ್ಲಾ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ಹೇಳಿದರು.

ಕೃತಿ ಲೇಖಕ ಪ್ರೊ.ಈರಣ್ಣ ಮಾತನಾಡಿ, ಅಂಬೇಡ್ಕರ್ ಅವರ ಕಠಿಣ ಪರಿಶ್ರಮ ಮತ್ತು ನಮ್ಮ ದೇಶ ಕುರಿತು ಗಂಭೀರ ಅಧ್ಯಯನದ ಫಲವೇ ಭಾರತ ಸಂವಿಧಾನ ಎಂದು ಹೇಳಿದರು.

ಪ್ರಾಂಶುಪಾಲ ಪ್ರೊ.ರಾಮಲಿಂಗಪ್ಪ ಟಿ.ಬೇಗೂರು ಮಾತನಾಡಿ, ಯುವಜನತೆಯ ಮೆದುಳುಗಳನ್ನು ಯಾವ್ಯಾವುದೊ ಸಂಘಟನೆಗಳು ತೊಳೆಯುವ ಕೆಲಸ ಮಾಡುತ್ತಿವೆ. ಆದರೆ ಸಂವಿಧಾನದಲ್ಲಿ ಇರುವ ಮೌಲ್ಯಗಳನ್ನು ನಮ್ಮ ಯುವಜನತೆಗೆ ಮನದಟ್ಟು ಮಾಡಿಕೊಡಬೇಕಾದ ಹಾಗೂ ಅವನ್ನು ಜಾರಿಗೆ ತರಬೇಕಾದ ಅಗತ್ಯ ಇದೆ. ಭಗವದ್ಗೀತೆ ಆಗಲಿ, ವೇದ, ಉಪನಿಷತ್, ಮಹಾಕಾವ್ಯಗಳು, ಪುರಾಣಗಳು ಎಲ್ಲವೂ ಶಬ್ದ ಪ್ರಮಾಣಗಳೆ. ನುಡಿ ನಿರೂಪಣೆಗಳೆ. ಇವ್ಯಾವುವೂ ನಮ್ಮ ಪವಿತ್ರ ಗ್ರಂಥಗಳಲ್ಲ. ನಾವೆಲ್ಲ ಪಾಲಿಸಬೇಕಾದ ನಮ್ಮ ರಾಷ್ಟ್ರದ ಪವಿತ್ರಗ್ರಂಥ ಯಾವುದಾದರು ಇದ್ದರೆ ಅದು ನಮ್ಮ ಸಂವಿಧಾನ ಮಾತ್ರ ಎಂದರು.

ಕಾಡುಗೋಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಮುನಿನಾರಾಯಣಪ್ಪ, ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ.ಎ.ಜಿ.ಶ್ರೀಧರಬಾಬು, ವಕೀಲರಾದ ಹರೀಂದ್ರ, ನಾಗರಾಜ್, ಪುರು ಪ್ರಕಾಶನದ ಪುರುಷೋತ್ತಮ್, ಸಿಡಿಸಿ ಸದಸ್ಯ ಸುರೇಶ್, ಪ್ರೊ.ದೊಡ್ಡಹನುಮಯ್ಯ, ಪ್ರೊ.ರವಿಚಂದ್ರ, ಶ್ರೀನಿವಾಸ್ ಆಚಾರ್, ನಿಲಯ ಪಾಲಕ ಪುಟ್ಟಸ್ವಾಮಿ, ದೇವಪ್ಪ, ಶ್ರೀನಿವಾಸಪ್ಪ ಇತರರಿದ್ದರು.

ಫೋಟೋ: 24 ಹೆಚ್‌ಎಸ್‌ಕೆ 4

ಹೊಸಕೋಟೆ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಪುರು ಪ್ರಕಾಶನದ ಪ್ರಾಧ್ಯಾಪಕ ಪ್ರೊ.ಈರಣ್ಣ ರಚಿಸಿರುವ ‘ಭಾರತದ ಸಂವಿಧಾನದ ಮೌಲ್ಯಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು.