ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಂಸ್ಕಾರವಿಲ್ಲದ ಜೀವನ ಆತ್ಮವಿಲ್ಲದ ದೇಹದಂತೆ ಎಂದು ವಿನಮ್ರ ಸೇವಕ, ಡಿವೈನ್ ಪಾರ್ಕ್ ಟ್ರಸ್ಟ್ ಸಂಸ್ಥೆಯ ಡಿ.ಎಸ್. ಯಶವಂತ ಅಭಿಪ್ರಾಯಪಟ್ಟರು.ನಗರದ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕನ್ನಡ ಮತ್ತು ಇಂಗ್ಲಿಷ್ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಭಾಗವಹಿಸಿದ್ದರು.
ಇಂದಿನ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜ್ಞಾನ ಸಂಪಾದನೆಯನ್ನು ಕಾಣುತ್ತೇವೆ, ಆದರೆ ಆಧ್ಯಾತ್ಮಿಕವಾಗಿ ಹಾಗೂ ಧಾರ್ಮಿಕವಾಗಿ ಕೊರತೆ ಇರುವುದನ್ನು ನಾವು ಗಮನಿಸಬೇಕು. ಜಗತ್ತಿಗೆ ಚೇತನರಾಗಿದ್ದ ಸ್ವಾಮಿ ವಿವೇಕಾನಂದರು ಈ ನಿಟ್ಟಿನ ಆಲೋಚನೆಯನ್ನು ಯುವಕರಿಗೆ ನೀಡಿದ್ದಾರೆ ಎಂದರು.ವಿವೇಕಾನಂದರ ಚಿಂತನೆಗಳು ಹಾಗೂ ಅವರ ಆಲೋಚನಾ ಶಕ್ತಿ ಜಗತ್ತಿಗೆ ಸ್ಪೂರ್ತಿದಾಯಕವಾಗಿತ್ತು. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ವಿವೇಕಾನಂದರ ಯೋಚನೆಗಳು ಪರಿಣಾಮಕಾರಿಯಾದ ಬುನಾದಿಗಳನ್ನು ಕಲ್ಪಿಸಿತು. ದೇಶಭಕ್ತಿಯ ಜೊತೆ ಆಧ್ಯಾತ್ಮಿಕ ಆಲೋಚನೆ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.
ಆತ್ಮಸ್ಥೈರ್ಯವೇ ಮನುಷ್ಯನ ಮುಖ್ಯ ಸಾಧನ ಶಕ್ತಿಯಾಗಿದೆ. ಪ್ಯಾರಾ ಒಲಂಪಿಕ್ ಕ್ರೀಡಾಸ್ಪರ್ಧೆಯಲ್ಲಿ ಅಂಗವಿಕಲತೆ ಇರುವ ವ್ಯಕ್ತಿಗಳು ಸಾಧನೆ ಮಾಡುತ್ತಾರೆ. ಸದೃಢರಾದ ನಮಗೇಕೆ ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿಕೊಳ್ಳಬೇಕು. ಮಾನಸಿಕ ವೈಕಲ್ಯತೆಗೆ ಒಳಗಾಗಿರುವ ಇಂದಿನ ಯುವ ಸಮುದಾಯ ಚೈತನ್ಯ ಶೂನ್ಯರಾಗಿ ಬದುಕುತ್ತಿದ್ದಾರೆ. ನಿನ್ನನ್ನು ನೀನು ಗೆಲ್ಲು ಆಗ ಜಗತ್ತೇ ನಿನ್ನ ಅಡಿಯಾಳಾಗುತ್ತದೆ ಎಂಬ ಯುಕ್ತಿಯಂತೆ ಮಾನಸಿಕ ನಿಶ್ಚಿತತೆ ಬಹಳ ಮುಖ್ಯವಾದ ಸಿದ್ಧತೆ ಎಂದರು.ಸಮಾಜದಲ್ಲಿ ಇಂದು ಯುವಕರಿಗೆನಾನಾ ತರಹದ ಯೋಚನೆಗಳು ಬಂದರೂ ತಮ್ಮ ಗುರಿಗಳ ಬಗ್ಗೆ ಗಮನವಿರಬೇಕು. ಗುರಿ ಇಲ್ಲದ ಜೀವನ ಚುಕ್ಕಾಣಿ ಇಲ್ಲದ ದೋಣಿಯಂತೆ, ಎಣ್ಣೆ ಇಲ್ಲದ ದೀಪದಂತೆ ಆಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಏಳಿ ಎದ್ದೇಳಿ ತಮ್ಮ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಹೇಳಿದ ಸ್ವಾಮಿ ವಿವೇಕಾನಂದರ ಮಾತು ಯುವಕರಲ್ಲಿ ಸ್ಥಾಪಿತವಾಗಬೇಕು. ಸೋಮಾರಿತನದಲ್ಲಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಯುವಕರಿಗೆ ವಿವೇಕಾನಂದರ ಮಾತುಗಳು ಸ್ಪೂರ್ತಿಯಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ನಾವು ಮೊದಲು ನಮ್ಮನ್ನು ನಾವು ಪ್ರೀತಿಸಬೇಕು, ಆನಂತರ ನಮ್ಮ ದೇಶವನ್ನು ಪ್ರೀತಿಸಬೇಕು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಡಿ.ಗೀತಾ, ಸಹ ಪ್ರಾಧ್ಯಾಪಕರಾದ ಡಾ. ವಿನೋದಮ್ಮ, ಸಹಾಯಕ ಪ್ರಾಧ್ಯಾಪಕರಾದ ಎಂ. ನಾಗೇಶ, ಸಿ.ಎಂ. ಕಿರಣಕುಮಾರ್ ದೇಸಾಯ್, ಜೆ. ಮನೋಜ್ ಕುಮಾರ್, ಹಂಸವೇಣಿ, ವಿದ್ಯಾ, ಸುಲ್ತಾನ ಪೂರ್ಣಿಮಾ ಪಿ.ಆರ್.ಓ, ಡಿವೈನ್ ಪಾರ್ಕ್ ಭಕ್ತರು, ವಿದ್ಯಾರ್ಥಿಗಳು ಇದ್ದರು.