ಸಾರಾಂಶ
ಶಿಗ್ಗಾಂವಿ: ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅಂತರ್ ವಿಭಾಗಗಳ ದೇಶಿ ಕ್ರೀಡಾಕೂಟ ಆಯೋಜನೆ ಮಾಡುವ ನಿಮಿತ್ತ ಪೂರ್ವಭಾವಿಯಾಗಿ ಕ್ರೀಡಾಂಗಣದ ಸಿದ್ಧತೆಯನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ವೀಕ್ಷಣೆ ಮಾಡಿದರು.
ಸ್ಥಳ ಪರಿಶೀಲನೆ ಆನಂತರ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ದೇಶಿ ಕ್ರೀಡೆಗಳ ಮಹತ್ವ ತಿಳಿಸಲು ಹಾಗೂ ಆ ಕ್ರೀಡೆಗೆ ಉತ್ತೇಜನ ನೀಡುವ ಸದುದ್ದೇಶದಿಂದ ದೇಶಿ ಕ್ರೀಡಾಕೂಟ ಆಯೋಜನೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿ ಸುತ್ತೋಲೆ ಹೊರಡಿಸಲಾಗುವುದು ಎಂದರು.ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್ ಮಾತನಾಡಿ ವಿಶ್ವವಿದ್ಯಾಲಯದ ಆವರಣದಲ್ಲಿ ಒಳಾಂಗಣ ಹಾಗೂ ಹೊರಾಂಗಣ ದೇಶಿ ಆಟಗಳ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗಾಗಿ ಆಯೋಜನೆ ಮಾಡಲಾಗುವುದು. ಹೊರಾಂಗಣ ಆಟಗಳಾದ ಕೋಕೋ, ಕಬಡ್ಡಿ, ಕುಸ್ತಿ, ಕ್ರಿಕೆಟ್, ವಾಲಿಬಾಲ್, ಮೋಜಿನ ಅಟಗಳು, ಚಮಚ ಮೇಲೆ ಲಿಂಬೆಹಣ್ಣು ಸ್ಪರ್ಧೆ, ಸೂಜಿ ದಾರ ಸ್ಪರ್ಧೆ, ಫುಟ್‌ಬಾಲ್, ಶಟಲ್ ಕಾಕ್, ಬ್ಯಾಡ್ಮಿಂಟನ್ ಇನ್ನಿತರ ಆಟಗಳು, ಚೌಕ್ ಮಣಿ ಆಟ, ಚೆಸ್, ಹಾವು ಏಣಿ, ಪಗಡಿ, ಹುಲಿ ಆಕಳು ಆಟಗಳು, ಕೇರಂ ಬೋರ್ಡ್ ಇನ್ನಿತರ ಒಳಾಂಗಣ ಆಟಗಳನ್ನು ಆಡಿಸಲಾಗುವುದು. ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯ ಮುಖ್ಯವಾಗಿ ಜಾನಪದ ತವರು ವಿಶ್ವವಿದ್ಯಾಲಯ ಆಗಿರುವುದರಿಂದ ಜಾನಪದಕ್ಕೆ ಸಂಬಂಧಿಸಿದ ದೇಶಿ ಅಟಗಳು ಆಧುನಿಕ ಸಂದರ್ಭದಲ್ಲಿ ಕಣ್ಮರೆ ಆಗುತ್ತಿವೆ. ಆದ್ದರಿಂದ ನಮ್ಮ ಮಕ್ಕಳಿಗೆ ದೇಶಿ ಆಟಗಳ ಪರಿಚಯ ಮಾಡುವುದು ಪಾರಂಪರಿಕ ದೇಶಿ ಆಟಗಳನ್ನು ಪ್ರಸ್ತುತಪಡಿಸುವುದು ವಿಶ್ವವಿದ್ಯಾಲಯದ ಮುಖ್ಯ ಉದ್ದೇಶವಾಗಿದೆ ಎಂದರು.
ಸಹಾಯಕ ಕುಲಸಚಿವ ಷಹಾಜಹಾನ್ ಮುದಕವಿ, ಸಹಾಯಕ ಪ್ರಾಧ್ಯಾಪಕ ಹಾಗೂ ಕ್ರೀಡಾ ಸಂಯೋಜನಾಧಿಕಾರಿ ಡಾ. ವೆಂಕನಗೌಡ ಪಾಟೀಲ ಇದ್ದರು.ತರಗತಿಗಳಿಗೆ ಭೇಟಿ: ದೃಶ್ಯ ಕಲಾ ಹಾಗೂ ಜನಪದ ಕಲಾ ವಿಭಾಗಕ್ಕೆ ಅಧಿಕಾರಿಗಳು ಭೇಟಿ ನೀಡಿ ಕೆಲಕಾಲ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅವರು ದೃಶ್ಯ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕುರಿತಾದ ಚಿತ್ರ ರಚಿಸುವ ಟಾಸ್ಕ್ ನೀಡಿ, ಚಿತ್ರಿಸಿದ ಅತ್ಯುತ್ತಮ ೩ ಕಲಾಕೃತಿಗಳಿಗೆ ಪ್ರಶಸ್ತಿ ನೀಡುವುದಾಗಿ ತಿಳಿಸಿದರು. ಪ್ರಥಮ ಬಹುಮಾನ ಪಡೆದಿರುವ ಕಲಾಕೃತಿಯನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ತಿಳಿಸಿದರು.
ಡಾ. ಶಂಕರ್ ಕುಂದಗೋಳ, ಡಾ. ಚಂದ್ರಪ್ಪ ಸೊಬಟಿ, ಡಾ. ವಿಜಯಲಕ್ಷ್ಮೀ ಗೇಟಿಯವರ, ಅನ್ನಪೂರ್ಣಾ ಲಿಂಬಿಕಾಯಿ ಇದ್ದರು.