ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ನ ಕೊಠಡಿಗೆ ಬೀಗ

| Published : Dec 20 2023, 01:15 AM IST

ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ನ ಕೊಠಡಿಗೆ ಬೀಗ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಕ್ಯಾನಿಂಗ್ ಯಂತ್ರದಲ್ಲಿರುವ ಮಾಹಿತಿ ಅಳಿಸಿ ಹಾಕಿರುವ ಹಿನ್ನೆಲೆ, ಲಕ್ಷ್ಮಿ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್ ನ ಸ್ಕ್ಯಾನಿಂಗ್ ಕೊಠಡಿ ಸೀಲ್, ಸೂಕ್ತ ದಾಖಲೆ ನೀಡುವಂತೆ ನೋಟಿಸ್ ಜಾರಿ, ಪಾಲನೆ ಮಾಡದಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ನಾಗಮಂಗಲ

ಸ್ಕ್ಯಾನಿಂಗ್ ಯಂತ್ರಗಳಲ್ಲಿನ ಮಾಹಿತಿಗಳನ್ನು ಅಳಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಲಕ್ಷ್ಮಿ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್ ನ ಸ್ಕ್ಯಾನಿಂಗ್ ಕೊಠಡಿಗಳನ್ನು ಪಾಂಡವಪುರ ಉಪ ವಿಭಾಗಾಧಿಕಾರಿ ಎಲ್ ನಂದೀಶ್ ನೇತೃತ್ವದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಸೀಲ್ ಮಾಡಿದ್ದಾರೆ.

ಪಟ್ಟಣದ ಲಕ್ಷ್ಮಿ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್ ಗೆ ಮಂಗಳವಾರ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದರು ಈ ವೇಳೆ ಸ್ಕ್ಯಾನಿಂಗ್ ದಾಖಲಾತಿ ಪುಸ್ತಕ ಮತ್ತು ಸ್ಕ್ಯಾನಿಂಗ್ ಯಂತ್ರದಲ್ಲಿರುವ ಮಾಹಿತಿಗಳು ಹೊಂದಾಣಿಕೆಯಾಗದಿರುವುದು ಕಂಡುಬಂದಿದೆ ಅಲ್ಲದೆ ಲಕ್ಷ್ಮಿ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಎರಡು ವರ್ಷಗಳ ಸ್ಕ್ಯಾನಿಂಗ್ ಮಾಹಿತಿಯನ್ನು ಅಳಿಸಿರುವುದು ಮತ್ತು ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಮೂರು ತಿಂಗಳ ಸ್ಕ್ಯಾನಿಂಗ್ ಮಾಹಿತಿಯನ್ನು ಅಳಿಸಿರುವುದು ಬೆಳಕಿಗೆ ಬಂದಿದೆ.

ಇದರಿಂದ ಅನುಮಾನಗೊಂಡು ಸೂಕ್ತ ದಾಖಲಾತಿ ಹಾಜರುಪಡಿಸುವಂತೆ ಎರಡು ಡಯಾಗ್ನೋಸ್ಟಿಕ್ ಸೆಂಟರ್ ಗಳ ವೈದ್ಯರು ಮತ್ತು ಸಿಬ್ಬಂದಿಗಳಿಗೆ ತಿಳಿಸಿದರಾದರು ಅಗತ್ಯ ದಾಖಲಾತಿ ಒದಗಿಸಲಿಲ್ಲ ಕಾನೂನು ಉಲ್ಲಂಘಿಸಿರುವ ಆರೋಪದಡಿಯಲ್ಲಿ ಎರಡು ಸ್ಕ್ಯಾನಿಂಗ್ ಕೊಠಡಿಗಳನ್ನು ಸೀಲ್ ಮಾಡಿ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ಗೆ ಅವರು ನೀಡುವ ಉತ್ತರದ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ವಹಿಸಲಾಗುವುದೆಂದು ಉಪ ವಿಭಾಗಾಧಿಕಾರಿ ನಂದೀಶ್ ತಿಳಿಸಿದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬೆಟ್ಟಸ್ವಾಮಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರಸನ್ನ ಹಿರಿಯ ಆರೋಗ್ಯ ಪರಿವೀಕ್ಷಕರಾದ ಸಿದ್ದಲಿಂಗಪ್ಪ ಮತ್ತು ಚಿಕ್ಕ ಸ್ವಾಮಿ ಇದ್ದರು.