ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತರಗತಿ ತೆಗೆದುಕೊಳ್ಳಲು ಉಪನ್ಯಾಸಕರಿಗೆ ಬೆದರಿಕೆ ಹಾಕಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಸ್.ನಾಗರಾಜು ಅವರು ಏಕಾಂಗಿ ಪ್ರತಿಭಟನೆ ನಡೆಸಿದರು.ನಗರದ ಮಂಡ್ಯ ವಿವಿಯ ಆಡಳಿತ ಭವನದ ಎದುರು ಏಕಾಂಗಿ ಪ್ರತಿಭಟನೆ ನಡೆಸಿದ ನಾಗರಾಜು ಅವರು, ಏ.೨೦ರಂದು ಚುನಾವಣಾ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಇರುವುದರಿಂದ ಕಲಾ ಭವನವನ್ನು ತೆಗೆದುಕೊಂಡ ಕಾರಣ ಅಂದಿನ ತರಗತಿಗಳನ್ನು ಏ.೨೮ರಂದು ತೆಗೆದುಕೊಳ್ಳುವಂತೆ ಮಂಡ್ಯ ವಿವಿ ಕುಲಸಚಿವರು ಆದೇಶ ಹೊರಡಿಸಿದ್ದರು ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಅಂದು ಕರ್ತವ್ಯ ನಿರ್ವಹಿಸಲು ಉಪನ್ಯಾಸಕರು ಮಂಡ್ಯ ವಿವಿಗೆ ತೆರಳಿದಾಗ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಪೊಲೀಸರು ಒಳಗಡೆ ಬಿಡಲಿಲ್ಲ, ಬದಲಿಗೆ ಮಂಡ್ಯ ವಿವಿಯ ಅಧಿಕಾರಿಗಳು ಗೈರಾಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.ನಂತರ ಕೆಲವರನ್ನು ಮಾತ್ರ ಒಳಗೆ ಹೋಗಲು ಅನುಮತಿ ನೀಡಿದರು. ತರಗತಿ ಕೊಠಡಿ ಬಳಿ ಬಂದ ಡಿವೈಎಸ್ಪಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಅವರು ಉಪನ್ಯಾಸಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರು, ಇದನ್ನು ಪ್ರಶ್ನೆ ಮಾಡಲು ಹೋದ ಉಪನ್ಯಾಸಕರಿಗೆ ಧಮಕಿ ಹಾಕಿದರು. ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ವಾರದ ರೈತರ ಚಳವಳಿ ಮುಂದುವರಿಕೆ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈಸೂರು-ಬೆಂಗಳೂರು ಹೆದ್ದಾರಿ ಬಳಿ ಜಿಲ್ಲಾ ರೈತ ಹಿತರಕ್ಷಣಾ ವೇದಿಕೆ ಮತ್ತು ಪ್ರಗತಿಪರ ಹೋರಾಟಗಾರರು ಜಿಲ್ಲೆಯ ನಾಲೆಗಳಿಗೆ ಕಾವೇರಿ ನೀರಿಗಾಗಿ ಆಗ್ರಹಿಸಿ ಸೋಮವಾರದ ಚಳವಳಿ ನಡೆಸಿದರು.ಬೆಳೆ ರಕ್ಷಣೆಗಾಗಿ ನಾಲೆಗಳಿಗೆ ನೀರು ನೀಡಲಿಲ್ಲ, ೨ಬೆಳೆ ಪರಿಹಾರ ನೀಡಲಿಲ್ಲ, ತಕ್ಷಣವೇ ಬೆಳೆನಷ್ಟ ಕಟ್ಟಿಕೊಡಬೇಕು ಎಂದು ಒತ್ತಾಯಿಸಿ, ಕರಪತ್ರ ಚಳವಳಿ ನಡೆಸಿದರು.ಪ್ರಧಾನ ಕಾರ್ಯದರ್ಶಿ ಕೆ. ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್ ವಕೀಲ ಮುದೇಗೌಡ, ಕನ್ನಡ ಸೇನೆ ಮಂಜುನಾಥ್, ಕೃಷ್ಣಪ್ರಕಾಶ್, ಕರವೇ ಶಂಕರೇಗೌಡ, ತಾಯಮ್ಮ, ಮೊತ್ತಹಳ್ಳಿ ಕೆಂಪೇಗೌಡ. ಫಯಾಜ್ ಇತರರಿದ್ದರು.