ಒಂಟಿ ವೃದ್ಧೆಗೆ ಸಿಕ್ಕಿತು ವಾತ್ಸಲ್ಯ ಮನೆ

| Published : Mar 23 2025, 01:31 AM IST

ಸಾರಾಂಶ

ಬದುಕಿನಂಚಿನ ಆಧಾರಕ್ಕೆ ಸದೃಢ ಸೂರಿನ ಆಸರೆ ಸಿಕ್ಕಂತಾಗಿದೆ.

ಕುಮಟಾ: ಗಂಡ-ಮಕ್ಕಳು ಯಾರೂ ಇಲ್ಲದೇ ಒಬ್ಬಂಟಿಯಾಗಿ ಚಿಕ್ಕದಾದ ತೆಂಗಿನಗರಿಯ ಹರಕಲು ಗುಡಿಸಲಿನಲ್ಲಿ ದಿನ ಕಳೆಯುತ್ತಿದ್ದ ತಾಲೂಕಿನ ಅಳ್ವೇಕೋಡಿಯ ದೇವಿ ತಿಮ್ಮಯ್ಯ ಪಟಗಾರ ಎಂಬ ವೃದ್ಧೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಮನೆ ನೀಡಲಾಗಿದೆ.

ಬದುಕಿನಂಚಿನ ಆಧಾರಕ್ಕೆ ಸದೃಢ ಸೂರಿನ ಆಸರೆ ಸಿಕ್ಕಂತಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಹೇಮಾವತಿ ಹೆಗ್ಗಡೆ ರೂಪಿಸಿದ ವಾತ್ಸಲ್ಯ ಕಾರ್ಯಕ್ರಮಗಳು ಸಾವಿರಾರು ಫಲಾನುಭವಿಗಳಿಗೆ ಹಲವು ಬಗೆಯಲ್ಲಿ ನೆರವು ನೀಡಲಾಗಿದೆ. ಮನೆಯಿಲ್ಲದವರಿಗೆ ಕಾಲೋಚಿತವಾಗಿ ಮನೆ ಕಟ್ಟಿಕೊಡುತ್ತಿದ್ದಾರೆ. ನಿರ್ಗತಿಕ ಫಲಾನುಭವಿಗಳಿಗೆ ಮಾಸಾಶನ, ಆಹಾರದ ಕಿಟ್, ಬಟ್ಟೆಯ ಕಿಟ್ ನೀಡಲಾಗುತ್ತಿದೆ. ತಾಲೂಕಿನಲ್ಲಿ ೯೫ ಫಲಾನುಭವಿಗಳಿದ್ದಾರೆ. ಅದರಂತೆ ವಾತ್ಸಲ್ಯ ಯೋಜನೆಯಡಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಅಳ್ವೇಕೋಡಿಯ ಒಂಟಿ ವೃದ್ಧೆ ದೇವಿ ತಿಮ್ಮಯ್ಯ ಪಟಗಾರ ಅವರಿಗೆ ವಾತ್ಸಲ್ಯ ಮನೆ ನಿರ್ಮಿಸಿ ಶನಿವಾರ ಗಣ್ಯರ ಸಮ್ಮುಖ ಹಸ್ತಾಂತರ ಮಾಡಲಾಯಿತು.

ಕುಮಟಾ ತಾಲೂಕಿನ ಪ್ರಥಮ ವಾತ್ಸಲ್ಯ ಮನೆ ಇದಾಗಿದ್ದು, ಸುಮಾರು ₹ ೧.೧೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಾತ್ಸಲ್ಯ ಮನೆಯು ಒಂದು ಹಾಲ್, ಅಡುಗೆ ಕೋಣೆ ಹಾಗೂ ಸ್ನಾನ-ಶೌಚ ಗೃಹ ಒಳಗೊಂಡಿದೆ. ಜ್ಞಾನವಿಕಾಸ ಕಾರ್ಯಕ್ರಮದ ವಾತ್ಸಲ್ಯ ಯೋಜನೆಯಡಿ ಉತ್ತರಕನ್ನಡ ಜಿಲ್ಲೆಯ ೬ನೇ, ರಾಜ್ಯದ ೭೦೫ನೇ ವಾತ್ಸಲ್ಯ ಮನೆ ಇದಾಗಿದೆ.

ಹೆಚ್ಚು ಮಂದಿಗೆ ತಲುಪಲಿ:

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಡವರ ಆಸೆ-ಆಶೋತ್ತರಗಳಿಗೆ ಪೂರಕವಾಗಿ ನಿಂತು ನಿರ್ಗತಿಕರಿಗೆ ಮನೆ ಕಟ್ಟಿಕೊಡುತ್ತಿರುವುದು ಅಮೋಘ ಸೇವೆ. ಯೋಜನೆಯ ಮೂಲಕ ಹೆಚ್ಚಿನ ಜನರಿಗೆ ತಲುಪಲಿ ಎಂದು ಸಾಮಾಜಿಕ ಕಾರ್ಯಕರ್ತ ಭಾಸ್ಕರ ಪಟಗಾರ ಹೇಳಿದರು.

ಅಳ್ವೇಕೋಡಿಯಲ್ಲಿ ನಿರ್ಮಿಸಲಾದ ವಾತ್ಸಲ್ಯ ಮನೆ ಸರಳ ಕಾರ್ಯಕ್ರಮದಲ್ಲಿ ಫಲಾನುಭವಿ ದೇವಿ ತಿಮ್ಮಯ್ಯ ಪಟಗಾರ ಇವರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯೆ ವೀಣಾ ನಾಯ್ಕ, ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ., ಯೋಜನಾಧಿಕಾರಿ ಕಲ್ಮೇಶ ಎಂ.ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು. ಕಲಭಾಗ ಪಂಚಾಯಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಸದಸ್ಯ ವಿರೂಪಾಕ್ಷ ನಾಯ್ಕ, ಗಣಪತಿ ಪಟಗಾರ, ಭಾರತಿ ಪಟಗಾರ, ಲಿಂಗಪ್ಪ ನಾಯ್ಕ, ದೇವಪ್ಪ ನಾಯ್ಕ, ಪ್ರಮೀಳಾ ನಾಯ್ಕ, ಜನಜಾಗೃತಿ ವೇದಿಕೆಯ ಯೋಗಾನಂದ ನಾಯ್ಕ, ಮೇಲ್ವಿಚಾರಕಿ ಸರೋಜಾ ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ವೀಣಾ ದಿನೇಶ ನಿರ್ವಹಿಸಿದರು.