ಆಲಂದೂರು ಮನೆ ಬಳಿಯೇ ಬಂದ ಒಂಟಿ ಸಲಗ

| Published : Sep 05 2025, 01:00 AM IST

ಸಾರಾಂಶ

ನರಸಿಂಹರಾಜಪುರ: ತಾಲೂಕಿನ ಕಡಹಿನಬೈಲು ಗ್ರಾಮದ ಆಲಂದೂರಿನ ಸುರೇಶ್ ಎಂಬುವರ ಮನೆ ಸಮೀಪಕ್ಕೆ ಒಂಟಿ ಸಲಗವೊಂದು ಬುಧವಾರ ರಾತ್ರಿ ಬಂದಿದ್ದು ಮನೆಯವರಿಗೆ ಹಾಗೂ ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ.

ನರಸಿಂಹರಾಜಪುರ: ತಾಲೂಕಿನ ಕಡಹಿನಬೈಲು ಗ್ರಾಮದ ಆಲಂದೂರಿನ ಸುರೇಶ್ ಎಂಬುವರ ಮನೆ ಸಮೀಪಕ್ಕೆ ಒಂಟಿ ಸಲಗವೊಂದು ಬುಧವಾರ ರಾತ್ರಿ ಬಂದಿದ್ದು ಮನೆಯವರಿಗೆ ಹಾಗೂ ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ.

ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಆಲಂದೂರು ಸುರೇಶ್ ಅವರ ಮನೆ ಎದುರಿನ ತೋಟಕ್ಕೆ ಬಂದ ಒಂಟಿ ಸಲಗ ಬಾಳೆ, ಅಡಕೆ ಗಿಡ ಹಾಗೂ ಪೈಪ್ ಲೈನ್ ನಾಶ ಮಾಡಿದೆ. ಶಬ್ದ ಕೇಳಿದ ಮನೆಯವರು ಬ್ಯಾಟರಿ ಬಿಟ್ಟು ನೋಡಿದಾಗ ಒಂಟಿ ಸಲಗ ಬಾಳೆ ತಿನ್ನುತ್ತಾ ನಿಂತಿರುವುದು ಕಂಡು ಬಂದಿದೆ. ಆನೆ ಬಾಳೆ ತಿನ್ನುತ್ತಿರುವ ಜಾಗಕ್ಕೂ ಮನೆಗೆ ಕೇವಲ 50 ಅಡಿ ಅಂತರವಿದೆ. ಸುಮಾರು 1 ಗಂಟೆಗೂ ಹೆಚ್ಚು ಕಾಲ ಒಂಟಿ ಸಲಗ ಅದೇ ಜಾಗದಲ್ಲಿ ಬಾಳೆ, ಅಡಕೆ ತಿನ್ನುತ್ತಾ ನಿಂತಿತ್ತು ಎನ್ನುತ್ತಾರೆ ಆಲಂದೂರು ಸುರೇಶ್.

ಗಾಬರಿಯಾದ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ, ಎಲಿಫಂಟ್ ಟಾಸ್ಕ್ ಪೋರ್ಸ್ ಸಿಬ್ಬಂದಿಗಳು ಆಗಮಿಸಿ ಪಟಾಕಿ ಸಿಡಿಸಿ ಒಂಟಿ ಸಲಗವನ್ನು ಕಾಡಿಗೆ ಅಟ್ಟಿದ್ದಾರೆ. ಇದಕ್ಕೂ ಮೊದಲು ಇದೇ ಒಂಟಿ ಸಲಗ ಪಕ್ಕದ ಆಲಂದೂರು ಕೆ.ಸಿ.ಮಂಜುನಾಥ್ ಅವರ ತೋಟಕ್ಕೂ ನುಗ್ಗಿ ಅಡಕೆ ಗಿಡವನ್ನು ನಾಶ ಮಾಡಿದೆ.

ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಪುಂಡ ಒಂಟಿ ಸಲಗವೊಂದನ್ನು ಇದೇ ಭಾಗದಲ್ಲಿ ಸೆರೆ ಹಿಡಿದು ಸಕ್ರೆಬೈಲಿನ ಆನೆ ಬಿಡಾರಕ್ಕೆ ಕಳಿಸಲಾಗಿತ್ತು. ಇದರಿಂದ ಒಂಟಿ ಸಲಗದ ಕಾಟ ತಪ್ಪಿದೆ ಎಂದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಮತ್ತೆ ಒಂಟಿ ಸಲಗ ಬಂದಿರುವುದು ಗ್ರಾಮಸ್ಥರನ್ನು ಗಾಬರಿಗೊಳಿಸಿದೆ.

-- ಬಾಕ್ಸ್ಸ್--

ತೀರ್ಥಹಳ್ಳಿಯತ್ತ ತಿರುಗಿದ ಕಾಡಾನೆಗಳುಶೃಂಗೇರಿ: ಕಳೆದ ಕೆಲದಿನಗಳಿಂದ ತಾಲೂಕಿನಲ್ಲಿ ಓಡಾಡಿ ಜನರಲ್ಲಿ ಆತಂಕ, ಭಯ ಹುಟ್ಟಿಸಿದ್ದ ಕಾಡಾನೆಗಳು ಬುಧವಾರ ಹೆಬ್ಬೆ ಬೆಟ್ಟದ ಮೂಲಕ ತೀರ್ಥಹಳ್ಳಿಯತ್ತ ಸಾಗಿವೆ ಎಂದು ತಿಳಿದುಬಂದಿದ್ದು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳು ಅಡ್ಡಗದ್ದೆ, ಬೇಗಾನೆ, ಬೇಗಾರು ಧರೆಕೊಪ್ಪ, ಕಲ್ಕಟ್ಟೆ ಸುತ್ತಮುತ್ತಲ ಹತ್ತಾರು ಗ್ರಾಮಗಳಲ್ಲಿ ಓಡಾಡಿ ಜನರಲ್ಲಿ ಭೀತಿ ಹುಟ್ಚಿಸಿತ್ತು. ಅಡಕೆ, ಬಾಳೆ, ಕಾಫಿ ತೋಟಗಳನ್ನು ಹಾನಿಗೊಳಿಸಿ ಅಪಾರ ನಷ್ಟವನ್ನುಂಟು ಮಾಡಿದ್ದವು.ಬುಧವಾರ ತಾಲೂಕಿನ ಧರೆಕೊಪ್ಪ ವ್ಯಾಪ್ತಿಯ ಕಲ್ಕಟ್ಟೆ ಗ್ರಾಮದಲ್ಲಿ ಕಂಡುಬಂದಿದ್ದ ಕಾಡಾನೆಗಳು ಸಂಜೆ ವೇಳೆ ಹೆಬ್ಬೆ ಬೆಟ್ಟದತ್ತ ಸಾಗಿ ತೀರ್ಥಹಳ್ಳಿಯತ್ತ ಹೋಗಿರಬಹುದೆಂದು ಗ್ರಾಮಸ್ಥರಿಂದ ತಿಳಿದು ಬಂದಿದೆ. ಗುರುವಾರ ತಾಲೂಕಿನ ಯಾವುದೇ ಕಡೆಯಿಂದ ಆನೆ ಓಡಾಟದ ಬಗ್ಗೆ ಮಾಹಿತಿಯಿರಲಿಲ್ಲ.